ADVERTISEMENT
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಗೆ ಪರ್ಯಾಯವಾಗಿ ಒಕ್ಕೂಟವನ್ನು ರಚಿಸಿಕೊಳ್ಳುವ ರಣತಂತ್ರದ ಭಾಗವಾಗಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗಲಿದ್ದಾರೆ.
ಮಾರ್ಚ್ 24ರಂದು ಕೋಲ್ಕತ್ತಾದಲ್ಲಿ ಈ ಇಬ್ಬರೂ ನಾಯಕರ ಭೇಟಿ ನಡೆಯಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಕಡಿವಾಣ ಹಾಕುವ ಭಾಗವಾಗಿ ಮಮತಾ ಬ್ಯಾನರ್ಜಿ ಜೊತೆಗಿನ ಕುಮಾರಸ್ವಾಮಿ ಭೇಟಿ ಮಹತ್ವ ಪಡೆದಿದೆ.
ಇದೇ ವಾರದಲ್ಲಿ ಮಮತಾ ಅವರು ಒಡಿಶಾ ಮುಖ್ಯಮಂತ್ರಿ ಮತ್ತು ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಲಿದ್ದಾರೆ. ಒಡಿಶಾದಲ್ಲಿ ಕಾಂಗ್ರೆಸ್ನ್ನು ಕಟ್ಟಿಹಾಕುವುದು ಈ ಭೇಟಿಯ ಉದ್ದೇಶ.
ಜೊತೆಗೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನೂ ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದಾರೆ.
ಕಳೆದ ವಾರವಷ್ಟೇ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಅವರನ್ನು ಮಮತಾ ಅವರು ಭೇಟಿ ಆಗಿದ್ದರು. ಉತ್ತರಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿಗೆ ಎರಡೂ ಪಕ್ಷಗಳು ನಿರ್ಧರಿಸಿದ್ದವು.
ಉಪ ಚುನಾವಣೆ ಸೋಲು ಮತ್ತು ಮಮತಾಗೆ ಕಾಂಗ್ರೆಸ್ ಆತಂಕ:
ಮಾರ್ಚ್ 5ರಂದು ಬಂದ ಉಪ ಚುನಾವಣಾ ಫಲಿತಾಂಶದಲ್ಲಿ ಪಶ್ಚಿಮ ಬಂಗಾಳದ ಸಾಗರ್ದಿಘಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಕಂಡಿತ್ತು. ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟದ ಕಾರಣದಿಂದ 51 ವರ್ಷಗಳ ಬಳಿಕ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು.
ಪಶ್ಚಿಮ ಬಂಗಾಳದಲ್ಲಿನ ಸದ್ಯದ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್-ಎಡಪಕ್ಷ ಮೈತ್ರಿಕೂಟ ಬಿಜೆಪಿಗೆ ಪರ್ಯಾಯವಾಗಿ ಪ್ರಬಲಗೊಳ್ಳುತ್ತಿದೆ ಎನ್ನುವುದು ಮಮತಾ ಬ್ಯಾನರ್ಜಿ ಅವರಿಗೆ ಕಾಡುತ್ತಿರುವ ಹೊಸ ಆತಂಕ.
ಹೀಗಾಗಿಯೇ ಉಪ ಚುನಾವಣೆ ಬೆನ್ನಲ್ಲೇ ಕರ್ನಾಟಕದಲ್ಲಿ ಜೆಡಿಎಸ್, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಒಡಿಶಾದಲ್ಲಿ ಬಿಜೆಡಿ, ದೆಹಲಿಯಲ್ಲಿ ಆಪ್, ತೆಲಂಗಾಣದಲ್ಲಿ ಬಿಆರ್ಎಸ್ ಹೀಗೆ ಕಾಂಗ್ರೆಸ್ ಪ್ರತಿರೋಧಿ ಪಕ್ಷಗಳ ಜೊತೆಗೆ ಸೇರಿಕೊಂಡು ಪರ್ಯಾಯ ಒಕ್ಕೂಟ ರಚಿಸಿಕೊಳ್ಳುವ ರಣತಂತ್ರ ಚುರುಕುಗೊಳಿಸಿದ್ದಾರೆ.
ADVERTISEMENT