ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಪಹಲ್ಗಾಮ್ನಲ್ಲಿರುವ ಶ್ರೀಚಂದ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಅದರಂತೆ, ರಕ್ಷಣಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ ನಂತರ ಪ್ರತಿದಾಳಿ ಮಾಡಲಾಯಿತು. ಈ ವೇಳೆ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಮೃತರಿಬ್ಬರೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.