ಇಸ್ಕಾನ್​ ರಥಯಾತ್ರೆ: ವಿದ್ಯುತ್​ ತಂತಿ ತಗುಲಿ 7 ಮಂದಿ ಭಕ್ತರು ಸಾವು

ಇಸ್ಕಾನ್​ ಆಯೋಜಿಸಿದ್ದ ಸ್ವಾಮಿ ಜಗನ್ನಾಥ ರಥಯಾತ್ರೆ ವೇಳೆ ರಥಕ್ಕೆ ಹೈಟೆನ್ಶನ್​ ವಿದ್ಯುತ್​ ತಂತಿ ತಗುಲಿ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ, 15 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತ್ರಿಪುರ ರಾಜ್ಯದ ಉನಾಕೋಟಿ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. 7 ದಿನದ ರಥಯಾತ್ರೆಯ ಬಳಿಕ ರಥವನ್ನು ಜಗನ್ನಾಥ ಬಾರಿ ದೇವಸ್ಥಾನಕ್ಕೆ ವಾಪಸ್​ ತೆಗೆದುಕೊಂಡು ಬರಲಾಗ್ತಿತ್ತು.

ದುರಂತ ಸ್ಥಳಕ್ಕೆ ತ್ರಿಪುರ ಸಿಎಂ ಡಾ ಮಾಣಿಕ್ ಸಾಹಾ ಭೇಟಿ ನೀಡಿದ್ದಾರೆ. 

ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಂಭೀರವಾಗಿ ಸುಟ್ಟುಹೋಗಿರುವ ಗಾಯಾಳುಗಳಿಗೆ 2.5 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಸುಟ್ಟ ಗಾಯಗಳಾಗಿರುವವರಿಗೆ 75 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ದುರಂತದ ಬಗ್ಗೆ ಮಾಜಿಸ್ಟ್ರೇಟ್​​ ತನಿಖೆಗೆ ಸಿಎಂ ಸಾಹಾ ಆದೇಶಿಸಿದ್ದಾರೆ.