ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳದ್ದೇ ಮೆಜಾರಿಟಿ ಗೆಲುವು.. ಆದರೂ ಸೋಮವಾರ ರಾತ್ರಿ ಟಾಸ್ ಗೆದ್ದ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯಕ್ಕೆ ಮಳೆ ಭೀತಿ ಇದ್ದ ಕಾರಣ ಚೇಸಿಂಗ್ ಮಾಡೋಕೆ ಧೋನಿ ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಸೇನೆ ಭರ್ಜರಿ 214 ರನ್ ಹೊಡೆದಿದ್ದನ್ನು ನೋಡಿ ಈ ಮ್ಯಾಚ್ನಲ್ಲಿ ಧೋನಿ ಸೇನೆಯ ಕತೆ ಅಷ್ಟೇ ಎಂದು ಭಾವಿಸಿದವರು ಅದೆಷ್ಟೋ ಮಂದಿ. ಅಲ್ಲಿಂದ ಮ್ಯಾಚ್ ಯಥಾ ಪ್ರಕಾರ ನಡೆದಿದ್ದಲ್ಲಿ ಇಷ್ಟು ಮಜಾ ಸಿಕ್ತಾನೆ ಇರಲಿಲ್ಲವೇನೋ?
ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ನಾಟಕೀಯ ರೀತಿಯಲ್ಲಿ ಮಾರನೇ ದಿನಕ್ಕೆ ಮುಂದೂಡುವಂತೆ ಮಾಡಿದ್ದು ವರುಣ. ಸೋಮವಾರ ರಾತ್ರಿಯೂ ರಂಗಪ್ರವೇಶ ಮಾಡಿದ ಮಳೆರಾಯ ಮ್ಯಾಚ್ಗೆ ಬಿಗ್ ಟ್ವಿಸ್ಟ್ ಕೊಟ್ಟಿತು. ಎರಡೂವರೆ ಗಂಟೆ ನಿಂತ ಆಟ.. ಅರ್ಧರಾತ್ರಿ ಮತ್ತೆ ಪ್ರಾರಂಭ ಆದಾಗ ಶುರುವಾಗಿದ್ದು ಅಸಲಿ ಮಜಾ.
15 ಓವರ್.. 171 ರನ್.. ರನ್ಗಳ ಬೇಟೆಗಾಗಿ ಚೆನ್ನೈ ಫೈಟ್.. ವಿಕೆಟ್ ಗಳಿಸಲು ಗುಜರಾತ್ ಬೇಟೆ.. ನೀನಾ ನಾನಾ ಎನ್ನುವಂತೆ ನಡೆದ ಕದನ.. ಕ್ಲೈಮ್ಯಾಕ್ಸ್ ಸೇರಿತ್ತು. ಕೊನೆಯ ಓವರ್ನಲ್ಲಿ 13 ರನ್ ಬೇಕಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಬೌಲರ್ ಮೋಹಿತ್ ನೀಡಿದ್ದು ಕೇವಲ ಮೂರು ರನ್.. ಅದಾಗಲೇ ಗುಜರಾತ್ ಪಾಳಯದಲ್ಲಿ ವಿಜಯೋತ್ಸಾಹ.. ಚೆನ್ನೈ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಆವರಿಸಿತ್ತು..ಆದರೆ, ಐದನೇ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ರವೀಂದ್ರ ಜಡೇಜಾ ಪಂದ್ಯದ ರೋಚಕತೆಯ ಅಂಚಿನಲ್ಲಿ ತಂದು ನಿಲ್ಲಿಸಿದರು. ಕೊನೆಯ ಎಸೆತದ ರೂಪದಲ್ಲಿ ಬಂದ ಫುಲ್ ಟಾಸ್ ಅನ್ನು ಫೈನ್ ಲೆಗ್ ಕಡೆ ತಿರುಗಿಸಿ ಹೊಡೆದ ಕೂಡಲೇ ಚೆಂಡು ಬೌಂಡರಿ ದಾಟಿತ್ತು. ಸ್ಟೇಡಿಯಂನಲ್ಲಿ ಯೆಲ್ಲೋ ಸಂಭ್ರಮ ಮುಗಿಲುಮುಟ್ಟಿತು..
ಐದನೇ ಐಪಿಎಲ್ ಟ್ರೋಫಿ ಚೆನ್ನೈ ಮಡಿಲು ಸೇರಿತ್ತು. ಸತತವಾಗಿ ಎರಡನೇ ಟ್ರೋಫಿ ಗೆಲ್ಲಬೇಕೆಂಬ ಗುಜರಾತ್ ಆಸೆಗೆ ತಣ್ಣೀರು ಬಿತ್ತು.. ಧೋನಿ ಇನ್ನೊಂದು ಐಪಿಎಲ್ ಆಡುವುದು ಅನುಮಾನ ಎಂದು ಭಾವಿಸುತ್ತಿರುವ ನೇಪತ್ಯದಲ್ಲಿಯೇ 42 ವರ್ಷದ ಮಹಿಭಾಯ್ ಮತ್ತೊಂದು ಟ್ರೋಫಿಯನ್ನು ಎತ್ತಿ ಹಿಡಿದು ವೃತ್ತಿಜೀವನದ ಅಂತಿಮ ಘಟ್ಟವನ್ನು ಚಿರಸ್ಮರಣೀಯವಾಗಿಸಿಕೊಂಡರು.
ADVERTISEMENT
ADVERTISEMENT