ಐಎಂಎ ಹಗರಣ ಕೇಸು: ಬೆಂಗಳೂರಿನ ಶಿವಾಜಿನಗರದ ಶಾಲೆ ಏಕಾಏಕಿ ಬಂದ್; ಪ್ರತಿಭಟನೆ

ಶಿವಾಜಿನಗರದ ಕ್ಲೀವ್‌ಲ್ಯಾಂಡ್ ಟೌನ್‌ನಲ್ಲಿರುವ ನೆಹರು ಆಂಗ್ಲ ಪ್ರೌಢಶಾಲೆಯನ್ನು ದಿಢೀರ್‌ ಮುಚ್ಚಿದ್ದರಿಂದ 500 ಕ್ಕೂ ಹೆಚ್ಚು ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲಾ ಗೇಟ್‌ಗಳ ಮುಂದೆ ಪ್ರತಿಭಟನೆ ನಡೆಸಿದರು.

ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ವಿಶೇಷ ನ್ಯಾಯಾಲಯದ ನಿರ್ದೇಶನದ ನಂತರ ಖಾಸಗಿ ಶಾಲೆಗೆ ನೋಟಿಸ್ ನೀಡಿ ಶಾಲೆಯನ್ನು ಮುಚ್ಚಲಾಯಿತು. ಪ್ರಕರಣದಲ್ಲಿ ಶಾಲೆಯನ್ನು ಸ್ಥಿರ ಆಸ್ತಿ ಎಂದು ಪಟ್ಟಿ ಮಾಡಲಾಗಿದೆ.

ಶಾಲೆಯನ್ನು ಮುಚ್ಚಿರುವ ಬಗ್ಗೆ ಅಥವಾ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪೂರ್ವ ಸೂಚನೆಯಿಲ್ಲದ ಕಾರಣ, ಆಕ್ರೋಶಗೊಂಡ ಪೋಷಕರು ಶಾಲೆಯನ್ನು ಪುನಃ ತೆರೆಯಬೇಕು ಅಥವಾ ಶುಲ್ಕ ಪಾವತಿಸಿರುವುದರಿಂದ ವರ್ಗಾವಣೆ ಪ್ರಮಾಣಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಐಎಂಎ ಹಗರಣ; ಸಚಿವ ರೋಷನ್ ಬೇಗ್​ಗೆ ಶರತ್ತು ಬದ್ಧ ಜಾಮೀನು

ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸೋಮವಾರ ಪೋಷಕರೊಂದಿಗೆ ಸಭೆ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್, ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡುವಂತೆ ಶಿಕ್ಷಣ ಇಲಾಖೆಗೆ ಯಾವುದೇ ಆದೇಶ ನೀಡಿಲ್ಲ ಎಂದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಪೊಲೀಸ್ ಸಿಬ್ಬಂದಿ ತಂಡ ಶಾಲೆಗೆ ಆಗಮಿಸಿದೆ. ಆದರೆ, ಪ್ರಾಂಶುಪಾಲರು ಸ್ವೀಕರಿಸಲು ನಿರಾಕರಿಸಿದ್ದರಿಂದ ಆದೇಶ ಪ್ರತಿಯನ್ನು ಪ್ರವೇಶ ದ್ವಾರದಲ್ಲಿ ಅಂಟಿಸಲಾಗಿದೆ. ಆದೇಶ ಪ್ರತಿಯ ವಿವರ ತಿಳಿದುಬಂದಿಲ್ಲ ಎಂದು ಭಾರತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

ಐಎಂಎ ಪ್ರಕರಣದಲ್ಲಿ ಸುಮಾರು 105 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವ ಮೂಲಕ ಕ್ಲೇಮ್ ಅರ್ಜಿದಾರರಿಗೆ ಬಾಕಿ ಪಾವತಿಸುವಂತೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಶಿಕ್ಷಕರನ್ನು ಐಎಂಎ ಪದಾಧಿಕಾರಿಗಳು ನೇಮಕ ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here