ಅಕ್ರಮ ಆಸ್ತಿ ಗಳಿಕೆ ಪ್ರಕರಣ : ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ, 63 ಲಕ್ಷ ದಂಡ

ಅಕ್ರಮ ಆಸ್ತಿ ಗಳಿಕೆ ಮಾಡಿದ್ದ ನಿವೃತ್ತ ಸಾರಿಗೆ ಅಧಿಕಾರಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ರೂ. ದಂಡವನ್ನು ವಿಧಿಸಿ ಬೆಳಗಾವಿಯ  ಲೋಕಾಯುಕ್ತ ಕೋರ್ಟ್ ತೀರ್ಪು ನೀಡಿದೆ.

ಕೋಲಾರ ಮೂಲದ ಬೆಳಗಾವಿಯ ಆಂಜನೇಯ ನಗರ ನಿವಾಸಿ ಪಿ. ಶಾಂತಕುಮಾರ್ ಶಿಕ್ಷೆಗೆ ಒಳಗಾದವರು. ಬೀದರ್ ಜಿಲ್ಲೆಯ ಹುಮನಾಬಾದ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿದ್ದಾಗ ಅಕ್ರಮವಾಗಿ ಅಪಾರ ಆಸ್ತಿ ಸಂಪಾದಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಅಂದಿನ ಬೆಳಗಾವಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆರ್. ಕೆ ಪಾಟೀಲ್ 2010ರ ಮೇ 3 ರಂದು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ : ಅಕ್ರಮ ಆಸ್ತಿ ಗಳಿಕೆ: ಮಾಜಿ ಮುಖ್ಯಮಂತ್ರಿಗೆ 4 ವರ್ಷ ಜೈಲು, 50 ಲಕ್ಷ ರೂ. ದಂಡ, ನಾಲ್ಕು ಆಸ್ತಿ ಜಪ್ತಿ

ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿದ್ದ ಶಾಂತಕುಮಾರ್ ಮನೆ ಹಾಗೂ ಹುಮನಾಬಾದ್ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ 1.14 ಕೋಟಿ ಆಸ್ತಿ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದ ಆರ್.ಬಿ. ಹವಾಲ್ದಾರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ನ್ಯಾಯಾಧೀಶ ಮೋಹನ ಪ್ರಭು ಆಲಿಸಿದ್ದರು. ಇದರಲ್ಲಿ 63 ಲಕ್ಷ ರೂ. ಹಣವನ್ನು ಭ್ರಷ್ಟಾಚಾರದ ಹಾಗೂ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂತಕುಮಾರ್‌ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 63 ಲಕ್ಷ ದಂಡ ವಿಧಿಸಿ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಇದನ್ನೂ ಓದಿ : ಅಕ್ರಮ ಆಸ್ತಿ ಗಳಿಕೆ ಆರೋಪ: ಡಿಕೆಶಿಗೆ ಸಮನ್ಸ್ ನೀಡಿದ ಸಿಬಿಐ

LEAVE A REPLY

Please enter your comment!
Please enter your name here