ಸಾ ರಾ ಮಹೇಶ್​ ಜೊತೆಗೆ ಸಂಧಾನಕ್ಕೆ ರೋಹಿಣಿ ಸಿಂಧೂರಿ ದಾಸರಿ ಯತ್ನ

ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಮತ್ತು ಈಗ ಮುಜುರಾಯಿ ಇಲಾಖೆ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ದಾಸರಿ ಅವರು ಮಾಜಿ ಸಚಿವ ಮತ್ತು ಕೆ ಆರ್​ ನಗರ ಜೆಡಿಎಸ್​ ಶಾಸಕ ಸಾ ರಾ ಮಹೇಶ್​ ಅವರ ಜೊತೆಗೆ ಸಂಧಾನಕ್ಕೆ ಯತ್ನಿಸಿದ್ದಾರೆ.
ಹಿರಿಯ ಐಎಎಸ್​ ಅಧಿಕಾರಿ ಆಗಿರುವ ಮಣಿವಣ್ಣನ್​ ಪಿ ಅವರ ಜೊತೆಗೆ ರೋಹಿಣಿ ಸಿಂಧೂರಿ ಅವರು ಸಾ ರಾ ಮಹೇಶ್​ ಅವರನ್ನು ಭೇಟಿಯಾಗಿದ್ದಾರೆ.
ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದ ವೇಳೆ ರೋಹಿಣಿ ಸಿಂಧೂರಿ ಅವರು ಸಾರಾ ಮಹೇಶ್​ ಅವರನ್ನು ಭೇಟಿ ಆಗಿದ್ದರು.

ಈ ಭೇಟಿಯ ಬಳಿಕ ಸಾ ರಾ ಮಹೇಶ್​ ಅವರ ವಾಟ್ಸಾಪ್​ಗೆ ರೋಹಿಣಿ ಸಿಂಧೂರಿ ಅವರು ಸಂದೇಶವನ್ನೂ ಕಳುಹಿಸಿದ್ದರು.
ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆ್ಯಪ್​​ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರವಷ್ಟೇ. ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ 
ಎಂದು ರೋಹಿಣಿ ಸಿಂಧೂರಿ ಅವರು ಸಾ ರಾ ಮಹೇಶ್​ ಅವರಿಗೆ ವಾಟ್ಸಾಪ್​ ಮಾಡಿದ್ದರು.
ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ರೋಹಿಣಿ ಸಿಂಧೂರಿ ದಾಸರಿ ಮತ್ತು ಸಾ ರಾ ಮಹೇಶ್​ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಮೈಸೂರಿನ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಅನುಮತಿ ಇಲ್ಲದೇ ಈಜುಕೊಳ ನವೀಕರಣ, ಕೋವಿಡ್​ ಅವಧಿಯಲ್ಲಿ ಅಕ್ರಮ ಎಸಗಲಾಗಿದೆ ಮತ್ತು ಚೀಲಗಳ ಖರೀದಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್​​ ಅವರು ಆರೋಪಿಸಿದ್ದರು.
ಸಾರಾ ಮಹೇಶ್​ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮುಜರಾಯಿ ಇಲಾಖೆಗೆ ಎತ್ತಂಗಡಿ ಮಾಡಲಾಗಿತ್ತು.
ಜೊತೆಗೆ ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ನವೀಕರಣಗೊಳಿಸಿ ಈಜುಕೊಳ ನವೀಕರಣ ಸಂಬಂಧ ತನಿಖೆಗೂ ಆದೇಶ ನೀಡಲಾಗಿತ್ತು.
ಇತ್ತ ಸಾ ರಾ ಮಹೇಶ್​ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಲ್ಯಾಣ ಮಂಟಪ ಕಟ್ಟಿದ್ದಾರೆ ಎಂದು ಹೇಳಿ ಮೈಸೂರು ಡಿಸಿ ಆಗಿದ್ದ ವೇಳೆ ರೋಹಿಣಿ ಅವರು ತನಿಖೆಗೆ ಆದೇಶಿಸಿದ್ದರು.
ಆದರೆ ಆ ಬಳಿಕ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ನಡೆಸಿದ ತನಿಖೆಯಲ್ಲಿ ಸಾರಾ ಮಹೇಶ್​ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ವರದಿ ನೀಡಿದ್ದರು.
ಈ ವರದಿ ಬಳಿಕ ರೋಹಿಣಿ ಸಿಂಧೂರಿ ದಾಸರಿ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಮತಿ ಕೇಳಿ ಪತ್ರ ಬರೆದಿದ್ದರು.
ವಿಧಾನಸಭಾ ಕಲಾಪದಲ್ಲೇ ರೋಹಿಣಿ ಸಿಂಧೂರಿ ವಿರುದ್ಧದ ಅಕ್ರಮಗಳ ಬಗ್ಗೆ ಸಾ ರಾ ಮಹೇಶ್​ ಮಾತಾಡಿದ್ದರು.

LEAVE A REPLY

Please enter your comment!
Please enter your name here