ಬಾಲಿವುಡ್ ನ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಮಾನವ ಕಳ್ಳಸಾಗಣೆ ಸಂಬಂಧಿಸಿದ ಪ್ರಕರಣಕ್ಕೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. 2003ರ ಪ್ರಕರಣಕ್ಕೆ ಸಂಬಂಧಿಸಿದ ಶಿಕ್ಷೆ ಇದಾಗಿದ್ದು, ಪಟಿಯಾಲ ನ್ಯಾಯಾಲಯವು ಶಿಕ್ಷೆಗೆ ಆದೇಶಿಸಿದೆ.
ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಲೇರ್ ಮೆಹಂದಿ ದೋಷಿಯೆಂದು ಸಾಬೀತಾಗುತ್ತಿದ್ದಂತೆಯೇ ದಲೇರಿ ಭಾವುಕರಾಗಿದ್ದರು. 2003ರಲ್ಲಿ ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿದ್ದವು. ಇವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದರು. ಪಟಿಯಾಲ ಜಿಲ್ಲಾ ನ್ಯಾಯಾಲಯವು ಅದನ್ನು ವಜಾಗೊಳಿಸಿದೆ.
19 ವರ್ಷಗಳ ಹಿಂದೆ ದಲೇರ್ ಮತ್ತು ಸಹೋದರ ಜನರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಲು ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾನವ ಕಳ್ಳಸಾಗಣೆ ಮತ್ತು ಪಿತೂರಿಗಾಗಿ ಅವರ ಮೇಲೆ ಆರೋಪ ಹೊರಿಸಲಾಗಿತ್ತು. 2018ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಆ ಮೇಲ್ಮನವಿ ಕೂಡ ವಜಾಗೊಂಡಿದ್ದು, ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.