ಮಿತ್ರ ಪಕ್ಷವಾದ ಬಿಜೆಪಿ ನಾಯಕರ ಬಗ್ಗೆ ಮತ್ತೆ ಅಪಸ್ವರ ಎತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇತಿಹಾಸವನ್ನು ಯಾರು ಬೇಕಾದರೂ ಹೇಗೆ ಬದಲಾಯಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾರ ಹೇಳಿಕೆಗೆ ಸೋಮವಾರ ತಿರುಗೇಟು ನೀಡಿದ್ದಾರೆ.
ಇತಿಹಾಸಕಾರರು ಇತರ ಅದ್ಭುತ ಸಾಮ್ರಾಜ್ಯಗಳನ್ನು ಕಡೆಗಣಿಸಿ ಮೊಘಲರ ಮೇಲೆ ಮಾತ್ರ ಗಮನಹರಿಸಿರುವುದರಿಂದ ಇತಿಹಾಸದ ಪುಸ್ತಕಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರು. ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ, ಇತಿಹಾಸವನ್ನ ಯಾರು ಬೇಕಾದರೂ ಬದಲಾಯಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.
ನೀವು ಇತಿಹಾಸವನ್ನು ಬದಲಾಯಿಸುತ್ತೀರಾ? ಅದನ್ನು ಹೇಗೆ ಬದಲಾಯಿಸಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ. ಇತಿಹಾಸ ಇತಿಹಾಸವಾಗಿರಬೇಕು ಎಂದು ಅವರು ಹೇಳಿದ್ದಾರೆ.
ಭಾಷೆ ವಿಚಾರವೇ ಬೇರೆ. ಇತಿಹಾಸವೇ ಬೇರೆ. ನೀವು ಮೂಲಭೂತ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಭಾರತದ ಬಹುತೇಕ ಇತಿಹಾಸಕಾರರು ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮತ್ತು ಅಹೋಮ್ಗಳಂತಹ ಅನೇಕ ಸಾಮ್ರಾಜ್ಯಗಳ ವೈಭವದ ನಿಯಮಗಳನ್ನು ನಿರ್ಲಕ್ಷಿಸಿ ಮೊಘಲರ ಇತಿಹಾಸವನ್ನು ಮಾತ್ರ ದಾಖಲಿಸಲು ಪ್ರಾಮುಖ್ಯತೆ ನೀಡಿದ್ದಾರೆ ಎಂದು ಅಮಿತ್ ಶಾ ಅವರು ಇತ್ತೀಚಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದರು.