ಹಿಂದಿ ರಾಷ್ಟ್ರ ಭಾಷೆ ಎಂದು ನಟ ಅಜಯ್ ದೇವಗನ್ ನೀಡಿರುವ ಹೇಳಿಕೆ ಹಾಗೂ ಅದಕ್ಕೆ ನಟ ಸುದೀಪ್ ಕೊಟ್ಟ ಉತ್ತರ ಇತ್ತೀಚೆಗೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿವಾದದಲ್ಲಿ ಗಾಯಕ ಸೋನು ನಿಗಮ್ ಎಂಟ್ರಿ ಕೊಟ್ಟಿದ್ದು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದಾರೆ.
ಪತ್ರಕರ್ತ ಸುಶಾಂತ್ ಮೆಹ್ತಾ ಅವರು ಇತ್ತೀಚೆಗೆ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆ ಹೇಳಿಕೆ ಕುರಿತು ಸೋನು ನಿಗಮ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಸೋನು ನಿಗಮ್ ಕೊಟ್ಟ ಉತ್ತರವನ್ನು ಅವರು ಟ್ವಿಟರ್ನ್ಲಲಿ ಹಂಚಿಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ.
ಸುಶಾಂತ್ ಮೆಹ್ತಾ ಅವರ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಸೋಮು ನಿಗಮ್ ಅವರು, ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಚ್ಚು ಜನ ಮಾತನಾಡುವ ಭಾಷೆ ಅದಾಗಿರಬಹುದು. ಆದರೆ, ರಾಷ್ಟ್ರ ಭಾಷೆಯಲ್ಲ. ತಮಿಳು ವಿಶ್ವದ ಅತಿ ಹಳೆಯ ಭಾಷೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಳೆಯ ಭಾಷೆ ಯಾವುದು ಎಂಬ ವಿಚಾರದಲ್ಲಿ ಕೆಲವರು ಸಂಸ್ಕೃತ ಎಂದರೆ, ಇನ್ನು ಕೆಲವರು ತಮಿಳು ಎನ್ನುತ್ತಾರೆ. ಚರ್ಚೆ ಮಾಡಬೇಕಾದ ಅನೇಕ ವಿಷಯಗಳಿವೆ. ಬೇರೆ ದೇಶಗಳಿಂದಲೇ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಈ ಚರ್ಚೆ ಅಗತ್ಯವಿದೆಯೇ?
ಪಂಜಾಬ್ನವರು ಪಂಜಾಬಿ ಮಾತನಾಡಲಿ, ತಮಿಳರು ತಮಿಳು ಮಾತನಾಡಲಿ. ಅವರಿಗೆ ಇಂಗ್ಲಿಷ್ ಅನುಕೂಲವಾಗುತ್ತದೆ ಎಂದಾದರೆ ಆ ಭಾಷೆಯಲ್ಲೇ ಮಾತನಾಡಲಿ. ನ್ಯಾಯಾಲಯಗಳಲ್ಲಿ ಆದೇಶವನ್ನು ಇಂಗ್ಲಿಷ್ನಲ್ಲೇ ನೀಡಲಾಗುತ್ತಿದೆ. ಇದೇನಿದು, ನಾವು ಹಿಂದಿ ಮಾತನಾಡಬೇಕು ಎನ್ನುವುದು?
ಇಂಗ್ಲಿಷ್ ಕೂಡ ಈಗ ನಮ್ಮ ದೇಶದ ಸಂಸ್ಕೃತಿಯಾಗಿಬಿಟ್ಟಿದೆ. ದೇಶದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ದೇಶದಲ್ಲಿ ಇನ್ನಷ್ಟು ಒಡಕು ಮೂಡಿಸದಿರೋಣ ಎಂದು ಸೋನು ನಿಗಮ್ ಹೇಳಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ ಹೇಳಿಕೆಗೆ ಕನ್ನಡದ ಕಿಚ್ಚ ಸುದೀಪ್, ಬಾಲಿವುಡ್ನ ಸೋನುಸೂದ್, ಖ್ಯಾತ ನಟ ಪ್ರಕಾಶ್ ರೈ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ, ಈ ರಾಜಕೀಯ ಚರ್ಚೆ ರಾಜಕೀಯ ತಿರುವು ಪಡೆದುಕೊಂಡಿತ್ತು.