ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ. ಇದರಲ್ಲಿ ತಪ್ಪಿಲ್ಲ. ಆದರೆ ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು. ನಂತರ ಹಿಂದಿ, ಇಂಗ್ಲಿಷ್ ಕಲಿಯಬೇಕು ಎಂದು ಮೈಸೂರಿನಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ ‘ಹಿಂದಿ ರಾಷ್ಟ್ರಭಾಷೆ ಅಲ್ಲ’ ಎಂದಿದ್ದರು. ಅದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, ‘ಹಿಂದಿ ರಾಷ್ಟ್ರ ಭಾಷೆ’ ಎಂದು ಪ್ರತಿಪಾದಿಸಿದ್ದರು. ರಾಷ್ಟ್ರಭಾಷೆ ವಿಚಾರದ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಅವರ ಮಾತು–ತಿರುಗೇಟಿನ ನಡುವೆ ‘ಹಿಂದಿ ರಾಷ್ಟ್ರ ಭಾಷೆ’ ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಹಲವು ಜನ ನಟ-ನಟಿಯರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ರಾಜಕಾರಣಿಗಳು ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸುದೀಪ್ ಅವರ ಧ್ವನಿಗೆ ಧ್ವನಿಯಾಗಿದ್ದಾರೆ.