ADVERTISEMENT
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. ಎಫ್ಐಆರ್ ರದ್ದುಕೋರಿ ಪೂಂಜಾ ಅವರು ಅರ್ಜಿ ಸಲ್ಲಿಸಿದ್ದರು.
ಪೂಂಜಾ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಶಾಸಕರು ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಎಫ್ಐಆರ್ ದಾಖಲಾಗಿದೆ. ಶಾಸಕರ ಹೇಳಿಕೆಯಿಂದ ಹಿಂಸಾಚಾರ, ಕೋಮುಭಂಗ ಸಂಭವಿಸಿಲ್ಲ. ಆಡಳಿತ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ ಕಾರಣಕ್ಕಾಗಿ ರಾಜಕೀಯ ದುರುದ್ದೇಶದಿಂದ ಪೊಲೀಸರು ಒತ್ತಡದಿಂದ ಎಫ್ಐಆರ್ ದಾಖಲಿಸಿದ್ದಾರೆ ಎಂದು ವಾದಿಸಿದ್ದರು.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 153, 153ಎ ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿದ್ದರಾಮಯ್ಯ 24 ಹಿಂದೂಗಳ ಹತ್ಯೆ ಮಾಡಿದ್ದರು ಎಂದು ಪೂಂಜಾ ಆಧಾರರಹಿತ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ ನಮಿತಾ ಪೂಜಾರಿ ಅವರು ಕೊಟ್ಟ ದೂರಿನಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಸಿದ್ದರಾಮಯ್ಯ ಪರ ನೀವು ವೋಟ್ ಕೇಳಿದ್ದೀರಿ. ಬಜರಂಗದಳ ನಿಷೇಧ ಮಾಡ್ತೇವೆ ಎಂದು ಹೇಳಿದ ಕಾಂಗ್ರೆಸ್ ಪರ ಮತ ಕೇಳಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳ್ತಿದ್ದಾರೆ
ಎಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಚುನಾವಣಾ ಗೆಲುವಿನ ಬಳಿಕ ಶಾಸಕ ಹರೀಶ್ ಪೂಂಜಾ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧದ ತನಿಖೆಗೂ ಹೈಕೋರ್ಟ್ ತಡೆ ನೀಡಿದೆ.
ADVERTISEMENT