ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಸಂಗ್ರಹ ಮತ್ತು ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳ ಸಂಬಂಧ ಕರ್ನಾಟಕ ಹೈಕೋರ್ಟ್ನ ದ್ವಿಸದಸ್ಯ ಪೀಠ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.
ಬೆಂಗಳೂರು-ಕನಕಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆ ಕೊರತೆ ಸಂಬಂಧ 2022ರಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವೇಳೆ ಕರ್ನಾಟಕ ಹೈಕೋರ್ಟ್ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ವಯಂಪ್ರೇರಿತ ವಿಚಾರಣೆಗೆ ನಿರ್ಧರಿಸಿದೆ.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.
ಹೈಕೋರ್ಟ್ ಪ್ರಶ್ನೆಗಳು:
ಬೆಂಗಳೂರು-ಮೈಸೂರು ನಡುವಿನ ಕಾಮಗಾರಿಯನ್ನು ಪೂರ್ತಿಗೊಳಿಸದೆಯೇ ಟೋಲ್ ಸಂಗ್ರಹ ಆರಂಭಿಸಿರುವುದು,
ಟೋಲ್ ಗೇಟ್ನಲ್ಲಿ ವಾಹನ ತಡೆಗೋಸ್ಕರ ಬೂಮ್ ಬ್ಯಾರಿಯರ್ಗಳ ಅಸಮರ್ಪಕ ನಿರ್ವಹಣೆಯಿಂದ ವಾಹನಗಳಿಗೆ ಆಗಿರುವ ಹಾನಿ,
ಫಾಸ್ಟ್ಟ್ಯಾಗ್ನಲ್ಲಿ ಸಮಸ್ಯೆಯಿಂದಾಗಿ ನಗದು ಮೂಲಕ ಟೋಲ್ ಕಟ್ಟಬೇಕಾದ ಸ್ಥಿತಿ ಬಗ್ಗೆ ಪತ್ರಿಕೆಗಳಲ್ಲಿನ ವರದಿಯನ್ನು ಆಧರಿಸಿ ಸ್ವಯಂಪ್ರೇರಿತ ವಿಚಾರಣೆಗೆ ತೀರ್ಮಾನಿಸಿದೆ.
ಟೋಲ್ ಸಂಗ್ರಹಕ್ಕೂ ಮೊದಲು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕೆಂಬ ಟೋಲ್ ನಿಯಮಗಳ ಬಗ್ಗೆಯೂ ಹೈಕೋರ್ಟ್ ವಿಚಾರಣೆ ವೇಳೆ ಪ್ರಸ್ತಾಪಿಸಿತು.
ಟೋಲ್ ಸಂಗ್ರಹಕ್ಕೂ ಮೊದಲು ಈ ಎಲ್ಲ ಪೂರ್ವಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಅನಿಸುತ್ತಿದೆ ಎಂದಿರುವ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ವಿಚಾರಣೆ ಅಗತ್ಯ ಎಂದು ಭಾವಿಸಿ ವಿಚಾರಣೆಯನ್ನು ಏಪ್ರಿಲ್ 2ನೇ ವಾರಕ್ಕೆ ಮುಂದೂಡಿತು.
ADVERTISEMENT
ADVERTISEMENT