ಉತ್ತರ ಮೆಕ್ಸಿಕೊದಲ್ಲಿ ಕುಖ್ಯಾತ ಮಾದಕ ವಸ್ತು ಕಳ್ಳ ಸಾಗಣೆದಾರನೊಬ್ಬನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸಮಯದಲ್ಲಿ ಬೆಂಗಾವಲು ಹೆಲಿಕಾಪ್ಟರ್ ಪತನಗೊಂಡು ನೌಕಾಪಡೆಯ ಕನಿಷ್ಠ 14 ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಮೆಕ್ಸಿಕೊ ನೌಕಾಪಡೆ ತಿಳಿಸಿದೆ.
ನೌಕಾಪಡೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್, ಗ್ವಾಡಲಜರಾ ಕಾರ್ಟೆಲ್ ಸಂಸ್ಥಾಪಕ ರಾಫೆಲ್ ಕ್ಯಾರೊ ಕ್ವಿಂಟೆರೊ ಅವರನ್ನು ಕರೆದೊಯ್ಯುತ್ತಿದ್ದ ಮತ್ತೊಂದು ವಿಮಾನವನ್ನು ಬೆಂಗಾವಲು ಮಾಡುತ್ತಿತ್ತು. ಮೆಕ್ಸಿಕೊದ ಸಿನಾಲೋವಾದಲ್ಲಿ ಅವರನ್ನು ಬಂಧಿಸಲಾಗಿತ್ತು.
ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಬದುಕುಳಿದಿದ್ದು, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ನೌಕಾಪಡೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿರುವ ನೌಕಾಪಡೆ, ವಿಮಾನ ಅಪಘಾತಕ್ಕೂ ಮಾದಕವಸ್ತು ಕಳ್ಳಸಾಗಣೆದಾರನ ಬಂಧನಕ್ಕೂ ಸಂಬಂಧ ಇರುವ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದೆ.
ಹಲವು ವರ್ಷಗಳಿಂದ ಪರಾರಿಯಾಗಿದ್ದ ಡ್ರಗ್ಸ್ ಸಾಗಣೆದಾರ ಕ್ಯಾರೊ ಕ್ವಿಂಟೆರೊ, ಸಿನಾಲೋವಾದ ಚೊಯಿಕ್ಸ್ ಪಟ್ಟಣದಲ್ಲಿ ಅಡಗಿಕೊಂಡಿದ್ದ. ಸ್ನಿಫರ್ ನಾಯಿಯಿಂದ ಆತನನ್ನು ಪತ್ತೆಮಾಡಲಾಯಿತು ಎಂದು ನೌಕಾಪಡೆ ತಿಳಿಸಿದೆ.