ಹಿಂದೆಂದೂ ಕಂಡರಿಯದ ಬಿರು ಬಿಸಿಲಿನ ಬೇಗೆ ಈ ವರ್ಷ ದೇಶದಾದ್ಯಂತ ಇದ್ದು, ಹೀಗಾಗಿ ಶಾಲೆಗಳನ್ನು ಮೇ 16 ರಿಂದ ಪ್ರಾರಂಭಿಸಲು ಉದ್ದೇಶಿಸಿರುವುದನ್ನು ಮುಂದೂಡಬೇಕು. ಜೂನ್ 1 ರಿಂದ ಪ್ರಾರಂಭಿಸಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಬಿಸಿಲಿನ ಬೇಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರಿಬಿಸಿಲು ನೆತ್ತಿಯನ್ನೇ ಸುಡುತ್ತಲಿದೆ.
ಇಂಥ ಕಡು ಬೇಸಿಗೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳನ್ನು ಮೇ 16 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿರುವುದು ಸರಿಯಲ್ಲ. ಶಿಕ್ಷಣ ಇಲಾಖೆ ಆದೇಶಿಸಿರುವುದು ಎಳೆಯ ಮಕ್ಕಳ ಪಾಲಕರಿಗೆ ನುಂಗಲಾರದ ತುತ್ತಾಗಿದೆ. ಶಾಲೆಗಳನ್ನು ಮೇ 16 ರಿಂದ ಪ್ರಾರಂಭಿಸಿದರೂ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲವೆಂಬುದನ್ನು ನಾನು ಸ್ವತಃ ಮನಗಂಡಿದ್ದೇನೆ. ಒಂದು ವೇಳೆ ಮೇ 16 ಕ್ಕೆ ಶಾಲೆಗಳನ್ನು ಪ್ರಾರಂಭಿಸಿದರೆ ಉತ್ತರ ಭಾರತದಲ್ಲಿ ಮಕ್ಕಳು “ಸನ್ ಸ್ಟ್ರೋಕ್”ಗೆ ಒಳಗಾಗುವಂತೆ ರಾಜ್ಯದಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗುವ ಸಂಭವವಿದೆ ಎಂದು ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಜೂನ್ 1 ರಿಂದ ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸುವುದು ಸೂಕ್ತ. ಕಡಿಮೆ ಬೀಳುವ ಶೈಕ್ಷಣಿಕ ದಿನಗಳಲ್ಲಿ ಪ್ರತಿ ಶನಿವಾರ ಹೆಚ್ಚುವರಿ ಪಿರಿಯಡ್ಗಳನ್ನು ತೆಗೆದುಕೊಳ್ಳುವದರ ಮೂಲಕ ಸರಿಪಡಿಸಬಹುದಾಗಿದ್ದು ಕೂಡಲೇ ಜೂನ್ 1ರಿಂದ ಶಾಲೆಗಳನ್ನು ಪ್ರಾರಂಭಿಸಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಭಾಪತಿ ಹೊರಟ್ಟಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೋರಿದ್ದಾರೆ.