ಧರ್ಮಸ್ಥಳದಲ್ಲಿ ಭಕ್ತರಿಗೆ ಅನ್ನಪ್ರಸಾದ ನಿಲ್ಲಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆಯಾದರೂ ಎಂದಿನಂತೆ ಅನ್ನಪ್ರಸಾದ ನೀಡಲಾಗುತ್ತಿದೆ. ಅನ್ನಪ್ರಸಾದ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಅನ್ನಪ್ರಸಾದಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದ ನಿಯೋಗ ಆಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಸ್ಪಷ್ಟಪಡಿಸಿದೆ.
ಅನ್ನಪ್ರಸಾದ ನಿಂತಿದೆ ಎಂದು ಸುಳ್ಳು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಮಾಹಿತಿಯನ್ನು ಖಚಿತಪಡಿಸಿಕೊಳ್ಳದೇ ವಿಧಾನಸಭೆಯಲ್ಲೇ ಸುಳ್ಳು ಹೇಳುವುದು ಮಾಜಿ ಮುಖ್ಯಮಂತ್ರಿಗಳಾದವರ ಘನತೆಗೆ ತಕ್ಕುದ್ದಲ್ಲ ಎಂದು ಭಕ್ತರು ಕಿಡಿಕಾರಿದ್ದಾರೆ.
ಇವತ್ತು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಪ್ಪು ಮಾಹಿತಿ ನೀಡಿದ್ದರು. ಶಕ್ತಿ ಯೋಜನೆ ಜಾರಿಯಿಂದ ಕ್ಷೇತ್ರಕ್ಕೆ ಮಹಿಳಾ ಭಕ್ತರ ಹೆಚ್ಚಳದಿಂದ ಧರ್ಮಸ್ಥಳದಲ್ಲಿ ಅನ್ನಪ್ರಸಾದ ನಿಲ್ಲಿಸಲಾಗಿದೆ ಎಂದು ಹೇಳಿದ್ದರು.
ಅಧ್ಯಕ್ಷರೇ, ಅಶೋಕಣ್ಣ ಒಂದ್ನಿಮಿಷ..ಅಶೋಕಣ್ಣ ಒಂದ್ನಿಮಿಷ..ಈ 55 ಲಕ್ಷ ಜನ ಹೆಣ್ಮಕ್ಕಳು ಓಡಾಟ ಮಾಡೋಕೆ ಶುರು ಮಾಡಿ..ಧರ್ಮಸ್ಥಳದಲ್ಲಿ ಹೋದಾಗ್ಲೆಲ್ಲ ಕರೆಕ್ಟಾಗಿ ಊಟ ಕೊಡ್ತಿದ್ರು. ಈ ಊಟವನ್ನು ನಿಲ್ಲಿಸಿಬಿಟ್ಟಿದ್ದಾರಂತಲ್ವಾ..ಮೊನ್ನೆ ಅದ್ಯಾವುದೋ ನೋಡ್ತಿದೆ..
ಎಂದು ಕುಮಾರಸ್ವಾಮಿ ಅವರು ಹೇಳಿದ್ದರು.
ಪ್ರತಿ ದಿನ ಧರ್ಮಸ್ಥಳದ ಅನ್ನಪೂರ್ಣ ಛತ್ರದಲ್ಲಿ 30 ಸಾವಿರದಿಂದ 70 ಸಾವಿರ ಭಕ್ತರಿಗೆ ಅನ್ನಪ್ರಸಾದ ವಿತರಣೆ ಸೌಲಭ್ಯವಿದೆ.
ಭಾನುವಾರ ಮತ್ತು ಸೋಮವಾರ ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ಮತ್ತು ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೆ ಒಟ್ಟು 7 ಗಂಟೆ ಅನ್ನಪ್ರಸಾದ ವಿತರಣೆ ನಡೆಯುತ್ತದೆ.
ಮಂಗಳವಾರದಿಂದ ಶನಿವಾರದವರೆಗೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ 45 ನಿಮಿಷದವರೆಗೆ ಮತ್ತು ರಾತ್ರಿ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯುತ್ತದೆ.
ADVERTISEMENT
ADVERTISEMENT