ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಜಯ ಗಳಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ನಡುವೆ 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಕಾಂಗ್ರೆಸ್ ಬಿಟ್ಟು ಹೋದ ಇಬ್ಬರು ಇವತ್ತು ಟ್ವೀಟಿಸಿದ ವಾಕ್ಯಗಳು ಮಾಧ್ಯಮಗಳಲ್ಲಿ ಮತ್ತೆ ಚರ್ಚೆಗೆ ಆಹಾರವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಹೀನಾಯವಾಗಿ ಸೋತ ಮಾಜಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮತ್ತು ಯಶವಂತಪುರದಲ್ಲಿ ಮತ್ತೆ ಗೆದ್ದ ಶಾಸಕ ಎಸ್ ಟಿ ಸೋಮಶೇಖರ್ ಅವರ ಟ್ವೀಟ್.
ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗ್ಯೂ ಕೂಡಾ ಶ್ರೀ ಸಿದ್ದರಾಮಯ್ಯನವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಕುಂದುಕೊರತೆಯನ್ನು ಬಗೆಹರಿಸಲು ಯಾವಾಗಲೂ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಇದು ನಾವು ಕೆಲವರು ಪಕ್ಷವನ್ನು ಬಿಟ್ಟು ಉಪ ಚುನಾವಣೆಗೆ ಹೋಗುವಂತೆ ದೂಡಿತು ಎಂಬ ಸತ್ಯವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.
ಇದು ಮಾಜಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಾಡಿದ ಟ್ವೀಟ್.
2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.
ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?
ಚಿಕ್ಕಬಳ್ಳಾಪುರದಲ್ಲಿ ಸೋತ ಡಾ ಕೆ ಸುಧಾಕರ್ ಮಾಡಿದ ಟ್ವೀಟ್.
ಈ ಇಬ್ಬರ ಟ್ವೀಟ್ಗಳಲ್ಲಿ ಒಂದು ಸಾಮಾನ್ಯ ಅಂಶವಿದೆ. ಅಂದರೆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರ ದೂರು ದುಮ್ಮಾನಗಳಿಗೆ ಸ್ಪಂದಿಸಿಲ್ಲ ಎನ್ನುವುದು ಮತ್ತು ಸ್ವತಃ ಸಿದ್ದರಾಮಯ್ಯನವರೇ ತಮ್ಮ ಶಾಸಕರ ಹಿತಾಸಕ್ತಿಗಳನ್ನು ಕಾಪಾಡಲು ಅಸಹಾಯಕರಾದರು ಎನ್ನುವುದು (ವಿಫಲ ಅಲ್ಲ). ನೇರವಾಗಿ ಹೇಳುವುದಾದರೆ ಕುಮಾರಸ್ವಾಮಿ ಸರ್ಕಾರದಿಂದ ರೋಸಿ ಹೋಗಿದ್ದ ಶಾಸಕರು ತಮ್ಮ ಕಷ್ಟಗಳ ಪರಿಹಾರರ್ಥವಾಗಿ ಬಿಜೆಪಿಗೆ ಹೋದರು.
ನೇರವಾಗಿ ಹೇಳಿದ್ದ ಸಿದ್ದರಾಮಯ್ಯ:
ಸಮ್ಮಿಶ್ರ ಸರ್ಕಾರ ಬಂದ ಬಳಿಕ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಕೂತು ಸಿದ್ದರಾಮಯ್ಯ ಅವರು ಆಡಿದ್ದ ವೀಡಿಯೋ ಸಂದೇಶ ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿತು. ಸಿದ್ದರಾಮಯ್ಯನವರೇ ಸರ್ಕಾರ ಬೀಳಿಸಿದ್ದರೂ ಎಂಬುದಕ್ಕೆ ಇರುವ ದೃಶ್ಯ ಸಾಕ್ಷ್ಯ ಇದು.
ಆದರೆ ಜೆಡಿಎಸ್ ಸರ್ಕಾರಕ್ಕೆ ತಮ್ಮ ಒಪ್ಪಿಗೆ ಇರಲಿಲ್ಲ ಎಂದು ಬಹಿರಂಗವಾಗಿಯೇ, ನೇರವಾಗಿಯೇ ಹೇಳಿದ್ದರು ಸಿದ್ದರಾಮಯ್ಯ. ಆ ವಿಷಯದಲ್ಲಿ ಅವರು ಮುಚ್ಚು ಮರೆ ಮಾಡಲಿಲ್ಲ, ಅಡಗಿಸುವ ತಂತ್ರಗಾರಿಕೆ ಮಾಡಲಿಲ್ಲ.
2019ರ ಆಗಸ್ಟ್ನಲ್ಲಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್:
ದೇವೇಗೌಡರ ರಾಜಕೀಯದ ಆಟಗಳನ್ನೆಲ್ಲ ನೋಡಿ ಅನುಭವಿಸಿದ ನನಗೆ ಜೆಡಿಎಸ್ ಜೊತೆ ಮೈತ್ರಿಗೆ ಸಹಮತ ಇರಲಿಲ್ಲ ಎನ್ನುವುದು ನಿಜ. ನನ್ನಂತೆಯೇ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಜೊತೆ ಮೈತ್ರಿ ಅಷ್ಟೊಂದು ಇಷ್ಟ ಇರಲಿಲ್ಲ. ಆದರೆ ಪಕ್ಷದ ಹೈಕಮಾಂಡ್ ಆದೇಶಕ್ಕೆ ಶಿರಬಾಗಿ ನಾವು ಒಪ್ಪಿಕೊಂಡೆವು.
ಎಂದು ನೇರವಾಗಿಯೇ ಹೇಳಿದ್ದರು. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ಮುಚ್ಚುಮರೆಯ ಆಟವನ್ನಂತೂ ಆಡಿರಲಿಲ್ಲ.
ಒಂದು ವೇಳೆ ಮೈತ್ರಿ ಸರ್ಕಾರ ಮುಂದುವರಿದಿದ್ದರೆ:
ಒಂದು ವೇಳೆ ಜೆಡಿಎಸ್ ಜೊತೆಗೆ ಮೈತ್ರಿ ಸರ್ಕಾರ ಮುಂದುವರಿದಿದ್ದರೆ ಅದರ ನೇರ ಹೊಡೆತವನ್ನು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಬೇಕಿತ್ತು ಮತ್ತು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತನೇ ಇರಲಿಲ್ಲ.
1) ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಧೋರಣೆಯಿಂದ ಸೃಷ್ಟಿ ಆಗಬಹುದಾಗಿದ್ದ ಆಡಳಿತ ವಿರೋಧಿ ಅಲೆಯ ಹೊರೆಯನ್ನು ಕಾಂಗ್ರೆಸ್ ಹೊತ್ತುಕೊಳ್ಳಬೇಕಿತ್ತು.
2) ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ಬಹುಮತ ಬರುತ್ತಿರಲಿಲ್ಲ.
3) ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಕಾರಣದಿಂದ ಜೆಡಿಎಸ್ಗೆ ತನ್ನ ನೆಲೆಯನ್ನು ಕಾಂಗ್ರೆಸ್ ಬಿಟ್ಟುಕೊಡುವ ಪರಿಸ್ಥಿತಿ ಎದುರಾಗುತ್ತಿತ್ತು.
4) ಹಳೆ ಮೈಸೂರು ಭಾಗ ಮಾತ್ರವಲ್ಲ ಜೆಡಿಎಸ್ ಈ ಬಾರಿ ನೆಲೆ ವಿಸ್ತರಿಸಿಕೊಳ್ಳಲು ಬಯಸಿದ್ದ ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲೂ ಜೆಡಿಎಸ್ ವಿಸ್ತರಣಾ ನೀತಿಗೆ ಕಾಂಗ್ರೆಸ್ ಬೆಲೆ ತೆರಬೇಕಿತ್ತು.
5) ಒಂದು ವೇಳೆ ಅತಂತ್ರ ಸರ್ಕಾರ ಬಂದಿದ್ದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೋಗಿದ್ದರೂ ಅಚ್ಚರಿ ಇರುತ್ತಿರಲಿಲ್ಲ. ಮತ್ತೆ ಕಾಂಗ್ರೆಸ್ ಅಲ್ಪ ಮತದ ಪಕ್ಷವಾಗಿ ಜೆಡಿಎಸ್ನಲ್ಲೇ ಋಣದಲ್ಲೇ ಇರಬೇಕಾದ ಪರಿಸ್ಥಿತಿ ಬರುತ್ತಿತ್ತು.
6) ಮತ್ತೆ ಜೀವ ಕಳೆಯನ್ನು ಪಡೆಯುವ ಪ್ರಯತ್ನಿಸುತ್ತಿರುವ ಕಾಂಗ್ರೆಸ್ಗೆ ಕರ್ನಾಟಕವೇ ಸದ್ಯದ ಆಶಾಕಿರಣವಾಗಿತ್ತು. ಆದರೆ ಜೆಡಿಎಸ್ ಜೊತೆಗಿನ ಕಾಂಗ್ರೆಸ್ ಮೈತ್ರಿ ಮುಂದುವರಿಕೆ ಕಾಂಗ್ರೆಸ್ನ ಕರ್ನಾಟಕದಲ್ಲಿ ರಾಜಕೀಯವಾಗಿ ಇನ್ನಷ್ಟು ದುರ್ಬಲಗೊಳಿಸಿತ್ತು.
ಕಾಂಗ್ರೆಸ್ ರಾಜಕೀಯ ಹಿತದೃಷ್ಟಿಯಿಂದ ನೋಡುವುದಾದ್ರೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬಿದ್ದಿದ್ದು ಕಾಂಗ್ರೆಸ್ಗೆ ಲಾಭವಾಗಿದೆಯೇ ಹೊರತು ನಷ್ಟ ಉಂಟು ಮಾಡಿಲ್ಲ.
ಚುನಾವಣೆಯಲ್ಲಿ ವಿಷಯವೇ ಆಗಿರಲಿಲ್ಲ:
ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮೈತ್ರಿ ಸರ್ಕಾರ ಕೆಡವಿದರು ಎನ್ನುವುದು ಚುನಾವಣಾ ವಿಷಯವೇ ಆಗಿರಲಿಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹೊರತುಪಡಿಸಿದರೆ ಉಳಿದವರು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ADVERTISEMENT
ADVERTISEMENT