ADVERTISEMENT
ದೇಶದ ಅತ್ಯಂತ ದುಬಾರಿ ವಕೀಲ ಎಂದೇ ಖ್ಯಾತಿ ಪಡೆದಿರುವ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ 68ನೇ ಇಳಿವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ.
ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ಬ್ರಿಟನ್ ಪ್ರಜೆಯಾಗಿರುವ ಟ್ರಿನಾ ಅವರನ್ನು ಹರೀಶ್ ಸಾಳ್ವೆ ಭಾನುವಾರ ಮದುವೆ ಆಗಿದ್ದಾರೆ.
ಲಂಡನ್ನಲ್ಲಿ ನಡೆದ ಹರೀಶ್ ಸಾಳ್ವೆ ಅವರ ಈ ಮೂರನೇ ಮದುವೆಯಲ್ಲಿ ವಿಶ್ವದ ದೈತ್ಯ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನಿತಾ ಅಂಬಾನಿ, ಭಾರತ ಬಿಟ್ಟು ಲಂಡನ್ಗೆ ಓಡಿಹೋಗಿರುವ ಐಪಿಎಲ್ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ವಿಶ್ವದ ದೊಡ್ಡ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಒಳಗೊಂಡಂತೆ ಹಲವರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ.
2020ರಲ್ಲಿ ಹರೀಶ್ ಸಾಳ್ವೆ ಅವರು ತಮ್ಮ ಮೊದಲ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇಧನ ನೀಡಿದ್ದರು. ಆ ಬಳಿಕ 2020ರಲ್ಲೇ ಬ್ರಿಟನ್ ಮೂಲದ ಕಲಾವಿದೆ 56 ವರ್ಷದ ಕರೋಲಿನಾರನ್ನು ಸಾಳ್ವೆ ಮದುವೆ ಆಗಿದ್ದರು. ಎರಡನೇ ಪತ್ನಿಯಿಂದಲೂ ದೂರ ಆಗಿರುವ ಹರೀಶ್ ಸಾಳ್ವೆ ಲಂಡನ್ನಲ್ಲಿ ಮೂರನೇ ಮದುವೆಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಹರೀಶ್ ಸಾಳ್ವೆ ಅವರು ಮಾಹಿತಿಗಳ ಪ್ರಕಾರ ಕರೋಲಿನಾ ಜೊತೆಗೆ ಎರಡನೇ ಮದುವೆ ಆಗುವುದಕ್ಕೂ ಮೊದಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು.
ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹರೀಶ್ ಸಾಳ್ವೆ ಅವರನ್ನು ಒಂದೇ ದೇಶ ಒಂದೇ ಚುನಾವಣೆ ಸಂಬಂಧ ಅಧ್ಯಯನ ನಡೆಸುವ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿತ್ತು.
ನಟ ಸಲ್ಮಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣ, ರಿಲಯನ್ಸ್ ವ್ಯಾಜ್ಯಗಳು, ಟಾಟಾ-ಸೈರಸ್ ಮಿಸ್ತ್ರಿ ನಡುವಿನ ಉದ್ಯಮ ಕಲಹ, ವೋಡಾಫೋನ್ ತೆರಿಗೆ ಪ್ರಕರಣ ಹೀಗೆ ಪ್ರಮುಖ ವ್ಯಾಜ್ಯಗಳಲ್ಲಿ ಹರೀಶ್ ಸಾಳ್ವೆ ಅವರು ವಾದಿಸಿದ್ದರು.
ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಭಾರತ ಸರ್ಕಾರದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹಾಜರಾಗಿ ಕೇವಲ 1 ರೂಪಾಯಿ ಶುಲ್ಕ ಪಡೆಯುವ ಮೂಲಕ ಸುದ್ದಿಯಾಗಿದ್ದರು.
ADVERTISEMENT