ಪೇಜಾವರ ಶ್ರೀಗಳ ವಿರುದ್ಧದ ಹೇಳಿಕೆ: ಪೊಲೀಸ್ ವಿಚಾರಣೆಯಲ್ಲಿ ಹಂಸಲೇಖ ಹೇಳಿದ್ದೇನು.?

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಮಾತನಾಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಪೊಲೀಸ್ ವಿಚಾರಣೆಯಲ್ಲಿ ಹಂಸಲೇಖ ಅವರು, ನನ್ನ ಹೇಳಿಕೆಯಲ್ಲಿ ಯಾವ ಉದ್ದೇಶವು ಇರಲಿಲ್ಲ. ಮಾತನಾಡುವ ಬರದಲ್ಲಿ ಹಾಗೆ ಹೇಳಿಬಿಟ್ಟೆ. ಯಾಕೆ ಹಾಗೆ ಹೇಳಿದೆನೋ ಗೊತ್ತೆ ಆಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಿಪಡಿಸಿದರು. ನನ್ನ 70 ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲ. ತಪ್ಪಾಗಿದೆ ತನ್ನ ಹೇಳಿಕೆಯಿಂದ. ಯಾವ ಧರ್ಮ, ಜಾತಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ. ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ನನ್ನ ಕೆಲಸದಲ್ಲಿಯೂ ನನಗೆ ಸೆಟ್​ಬ್ಯಾಕ್ ಆಗಿದೆ. ನಾನು ಈ ಘಟನೆಯಿಂದ ತುಂಬಾ ನೋವು ಅನುಭವಿಸಿದ್ದೇನೆ ಎಂದು ತನಿಖಾಧಿಕಾರಿ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ, ಹಂಸಲೇಖ ಅವರು ತಾವು ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದರು. ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಕೃಷ್ಣ ಎನ್ನುವವರು ಹಂಸಲೇಖ ಅವರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹಂಸಲೇಖ ಅವರು ಪೊಲೀಸ್ ಠಾಣೆಗೆ ಆಗಮಿಸಿದಾಗ ಬಜರಂಗ ದಳದ ಕಾರ್ಯಕರ್ತರು ಹಂಸಲೇಖರ ವಿರುದ್ಧವಾಗಿ ಹಾಗೂ ನಟ ಚೇತನ್ ನೇತೃತ್ವದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಹಂಸಲೇಖರ ಪರವಾಗಿ ಘೋಷಣೆಗಳನ್ನು ಕೂಗಿದರು.

LEAVE A REPLY

Please enter your comment!
Please enter your name here