ವಾರಣಾಸಿಯ ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆಗಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆಯಾದರೂ ಮಸೀದಿಯಲ್ಲಿ ವೀಡಿಯೋ ಸಮೇತ ಸಮೀಕ್ಷೆ ನಡೆಸಿದ್ದ ಕೋರ್ಟ್ ನೇಮಿಸಿದ್ದ ವಕೀಲರ ತಂಡ ವರದಿ ಸಲ್ಲಿಕೆಗೆ ಸಮಯ ಕೇಳಿದೆ. ಈ ನಡುವೆ ವಾರಣಾಸಿ ಕೋರ್ಟ್ ಮಸೀದಿ ಸಮೀಕ್ಷೆಗೆ ತಾನು ನೇಮಕ ಮಾಡಿದ್ದ ಮುಖ್ಯ ಕೋರ್ಟ್ ಕಮೀಷನರ್ ಅಜಯ್ ಮಿಶ್ರಾ ಅವರನ್ನು ಮಾಹಿತಿ ಸೋರಿಕೆ ಆರೋಪಡಿ ತೆಗೆದುಹಾಕಿದೆ.
ಸಮೀಕ್ಷೆಯ ಮುಖ್ಯ ಕಮಿಷನರ್ ಆಗಿದ್ದ ತಮ್ಮನ್ನು ವಜಾಗೊಳಿಸಿದ್ದ ಕೋರ್ಟ್ ಆದೇಶದ ಬೆನ್ನಲ್ಲೇ ಕಮಿಷನ್ ಸದಸ್ಯರಾಗಿದ್ದ ವಿಶಾಲ್ ಸಿಂಗ್ ವಿರುದ್ಧ ಅಜಯ್ ಮಿಶ್ರಾ ತಿರುಗಿಬಿದ್ದಿದ್ದಾರೆ.
`ನನಗೆ ನಂಬಿಕೆದ್ರೋಹವಾಗಿದೆ. ನಾನು ಏನೂ ತಪ್ಪು ಮಾಡಿಲ್ಲ. ನನಗೆ ವಿಸ್ಪಾಲ್ ಸಿಂಗ್ ನಂಬಿಕೆದ್ರೋಹ ಮಾಡಿದ. ನನ್ನ ನಂಬಿಕೆಯನ್ನು ಆತ ದುರುಪಯೋಗಪಡಿಸಿಕೊಂಡ’ ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ.
`ಶಿವಲಿಂಗ ಪತ್ತೆ ಆಗಿದೆ’ ಎಂಬ ವರದಿ ಮಾಧ್ಯಮಗಳಿಗೆ ಸೋರಿಕೆ ಆದ ಸಂಬAಧ ಕೋರ್ಟ್ನಲ್ಲಿ ಹಿಂದೂ ಭಕ್ತೆಯರ ವಕೀಲರು ಮತ್ತು ಪ್ರತಿವಾದಿ ವಕೀಲರ ನಡುವೆ ವಾಗ್ವಾದ ನಡೆಯಿತು. ಕಮಿಷನ್ನಲ್ಲಿದ್ದ ವಕೀಲ ವಿಶಾಲ್ ಸಿಂಗ್ ಕೊಟ್ಟ ದೂರು ಆಧರಿಸಿ ಮುಖ್ಯ ಕಮಿಷನರ್ ಅಜಯ್ ಮಿಶ್ರಾ ಅವರನ್ನು ತೆಗೆದುಹಾಕಿ ಆ ತಂಡದಲ್ಲಿ ವಕೀಲ ವಿಸ್ಪಾಲ್ ಸಿಂಗ್ ಅವರನ್ನು ಕೋರ್ಟ್ ಮುಖ್ಯ ಕಮಿಷನರ್ ಎಂದು ನೇಮಿಸಿತು.
`ನಿನ್ನೆ ಮಧ್ಯರಾತ್ರಿ 12 ಗಂಟೆವರೆಗೆ ನಾವು ವರದಿ ಸಿದ್ಧಪಡಿಸುತ್ತಿದ್ದೆವು. ನನ್ನ ವಿರುದ್ಧ ವಿಶಾಲ್ ಸಿಂಗ್ ಪಿತೂರಿ ಮಾಡುತ್ತಿದ್ದ ನನಗೆ ಗೊತ್ತೇ ಇರಲಿಲ್ಲ. ನನಗೆ ತುಂಬಾ ಬೇಜಾರಾಗಿದೆ. ನಾನು ಪಕ್ಷಪಾತಿ ಆಗಿರಲಿಲ್ಲ. ಸರ್ವೆ ಬಗ್ಗೆ ನಾನು ಏನೂ ಹೇಳಲ್ಲ’ ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ.
ಇತ್ತ ವಕೀಲ ವಿಶಾಲ್ ಸಿಂಗ್ ಕೂಡಾ ಅಜಯ್ಮಿಶ್ರಾ ವಿರುದ್ಧ ಆರೋಪ ಮಾಡಿದ್ದಾರೆ. `ಅಜಯ್ಮಿಶ್ರಾ ನಡತೆ ಸರಿಯಿರಲಿಲ್ಲ. ಆತ ನೇಮಕ ಮಾಡಿದ್ದ ವೀಡಿಯೋಗ್ರಾಫರ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ವದಂತಿ ಹಬ್ಬಿಸುತ್ತಿದ್ದ. ನನ್ನ ವರದಿ ಪಾರದರ್ಶಕವಾಗಿರಲಿದೆ’ ಎಂದು ವಿಶಾಲ್ ಸಿಂಗ್ ಹೇಳಿದ್ದಾರೆ.
`ನಾನು ನೇಮಕ ಮಾಡಿದ್ದ ಫೋಟೋಗ್ರಾಫರ್ ನನ್ನ ವಂಚಿಸಿದ, ನಾನೇನು ಮಾಡಲಿ’ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.