ಕೆಲ ದಿನಗಳ ಹಿಂದೆಯಷ್ಟೇ ಮತ್ತೆ ಉದ್ಘಾಟನೆ ಆಗಿದ್ದ ಕೇಬಲ್​ ಸೇತುವೆ ಕುಸಿತ – 60 ಮಂದಿ ಸಾವು, ಗುಜರಾತ್​ನಲ್ಲಿ ದುರಂತ

ಗುಜರಾತ್​ ರಾಜ್ಯದ ಮೊರ್ಬಿಯಲ್ಲಿ ಮಛ್ಛು ನದಿಗೆ ನಿರ್ಮಿಸಲಾಗಿದ್ದ ಕೇಬಲ್​​​ ಬ್ರಿಡ್ಜ್​ ಕುಸಿದ ಕಾರಣ 60 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ.
ಈ ಕೇಬಲ್​ ಬ್ರಿಡ್ಜ್​ ಕುಸಿಯುವ ವೇಳೆ ಸೇತುವೆಯಲ್ಲಿ 400ಕ್ಕೂ ಅಧಿಕ ಮಂದಿ ಇದ್ದರು. ಸೇತುವೆ ಕುಸಿದ ಪರಿಣಾಮ 100 ಅಡಿ ಕೆಳಗಿರುವ ನದಿಗೆ ಬಿದ್ದಿದ್ದಾರೆ.
140 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನು 2 ವರ್ಷ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು.

ಕೆಲ ದಿನಗಳ ಹಿಂದೆಯಷ್ಟೇ ಸೇತುವೆಯನ್ನು ದುರಸ್ತಿ ಮಾಡಿದ ಬಳಿಕ ಮತ್ತೆ ಸಾರ್ವಜನಿಕರಿಗೆ ಮತ್ತೆ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತಿನಿಂದ ನವೆಂಬರ್​ 1ರವರೆಗೆ ಗುಜರಾತ್​ ಪ್ರವಾಸದಲ್ಲಿದ್ದಾರೆ.

ದುರಂತ ತಿಳಿದ ತಕ್ಷಣ ಪ್ರಧಾನಿ ಮೋದಿ ಅವರು ಮೃತರ ಕುಟುಂಬಕ್ಕೆ ಪ್ರಧಾನಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ನೆರವು ಘೋಷಿಸಿದ್ದಾರೆ.
ಗುಜರಾತ್​ ಸಿಎಂ ಕೂಡಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ದುರಂತ ಸ್ಥಳಕ್ಕೆ ದೌಡಾಯಿಸಿದ್ದಾರೆ.