ಜುಲೈ 2017 ರಲ್ಲಿ ಗುಜರಾತ್ನ ಮೆಹ್ಸಾನಾ ಪಟ್ಟಣದಲ್ಲಿ ಪೊಲೀಸ್ ಅನುಮತಿಯಿಲ್ಲದೆ ರ್ಯಾಲಿ ಆಯೋಜಿಸಿದ್ದಕ್ಕಾಗಿ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಮಂದಿಯನ್ನು ಗುಜರಾತ್ನ ಮೆಹ್ಸಾನಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಂದು ಗುರುವಾರ ದೋಷಿ ಎಂದು ತೀರ್ಪು ನೀಡಿದೆ. ಶಾಸಕ ಜಿಗ್ನೇಶ್ ಮೇವಾನಿಯರ ಜೊತೆ ಎಲ್ಲಾ 9 ಜನರಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ.ಗಳ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಮೆಹ್ಸಾನಾ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾದ ಜೆ ಎ ಫಾರ್ಮರ್ ತೀರ್ಪು ನೀಡಿದ್ದಾರೆ. ಈ ವಿಚಾರಣೆಯನ್ನು ನಡೆಸಿದ ಅವರು, ರ್ಯಾಲಿ ಮಾಡುವುದು ಅಪರಾಧವಲ್ಲ. ಆದರೆ, ಅನುಮತಿ ಪಡೆಯದೇ ರ್ಯಾಲಿ ಮಾಡುವುದು ಅಪರಾಧ ಎಂದಿದ್ದಾರೆ. ಅಲ್ಲದೇ, ಅವಿಧೇಯತೆಯನ್ನು ನ್ಯಾಯಾಲಯ ಸಹಿಸಲ್ಲ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಎನ್ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ)ಯ ನಾಯಕಿ ರೇಶ್ಮಾ ಪಟೇಲ್ ಅವರೂ ಈ ಪ್ರಕರಣದಲ್ಲಿ ಅಪರಾಧಿಯಾಗಿದ್ದಾರೆ.
2017 ರ ಜುಲೈ 12 ರಂದು ಉನಾದಲ್ಲಿ ನಡೆದಿದ್ದ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಜಿಗ್ನೇಶ್ ಮೇವಾನಿ ಮತ್ತು ಸಹಚರರು ಮೆಹ್ಸಾನಾದಿಂದ ಧನೇರಾ ಮಾರ್ಗವಾಗಿ ಬನಸ್ಕಾಂತ ಜಿಲ್ಲಾ ಕೇಂದ್ರಕ್ಕೆ ‘ಸ್ವಾತಂತ್ರ್ಯದ ಕೂಗು’ (ಅಜಾದಿ ಕೂಚ್) ಎಂಬ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿತ್ತು.
ರಾಷ್ಟ್ರೀಯ ದಲಿತ ಅಧಿಕಾರ ಸಂಘಟನೆಯ ಅಡಿಯಲ್ಲಿ ಮೇವಾನಿಯವರ ಸಹಚರ ಕೌಶಿಕ್ ಪಾರ್ಮರ್ ಅವರು ಈ ರ್ಯಾಲಿಗೆ ಅನುಮತಿ ಪಡೆದಿದ್ದರು. ಆದರೆ, ಅಧಿಕಾರಿಗಳು ಈ ಅನುಮತಿಯನ್ನು ವಾಪಾಸು ಪಡೆದರು. ಅನಂತರವೂ ರ್ಯಾಲಿ ನಡೆದಿತ್ತು.
ಸರ್ಕಾರದ ಅನುಮತಿ ಪಡೆಯದೇ ರ್ಯಾಲಿಯನ್ನು ನಡೆಸಿದ್ದಕ್ಕಾಗಿ ಮೆಹ್ಸಾನಾ ಪೊಲೀಸರು 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ರ್ಯಾಲಿಯಲ್ಲಿ ಆಗಿನ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ನಯ್ಯ ಕುಮಾರ್ ಅವರೂ ಭಾಗವಹಿಸಿದ್ದರೂ. ಪ್ರಸ್ತುತ ಕಾಂಗ್ರೆಸ್ ನಾಯಕರಾಗಿರುವ ಅವರನ್ನು ಈ ಪ್ರಕರಣದಲ್ಲಿ ಅಪರಾಧಿ ಎಂದು ಗುರುತಿಸಲಾಗಿದೆ.
ಪ್ರಕರಣ ದಾಖಲಾದ 12 ಜನರಲ್ಲಿ ಒಬ್ಬರು ಅಸುನೀಗಿದ್ದಾರೆ ಹಾಗೂ ಮತ್ತೊಬ್ಬರನ್ನು ತನಿಖೆಯಿಂದ ಹೊರಗಿಟ್ಟಿರುವ ಕೋರ್ಟ್ ಈಗ 10 ಜನರಿಗೆ ಶಿಕ್ಷೆ ಪ್ರಕಟಿಸಿದೆ. ಅನುಮತಿ ಪಡೆಯದೇ ರ್ಯಾಲಿ ಆಯೋಜಿಸಿರುವುದು ತಪ್ಪು. ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆದ ಬಳಿಕ ತಡವಾಗಿಯಾದೂ ರ್ಯಾಲಿ ನಡೆಸಬಹುದಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದಾರೆ ಎಂಬ ಪ್ರಕರಣದಲ್ಲಿ ಅಸ್ಸಾನ ಪೊಲೀಸರು ಏಪ್ರೀಲ್ 20 ರಂದು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಏಪ್ರೀಲ್ 25 ರಂದು ಜಾಮೀನು ಪಡೆದ ಇವರನ್ನು ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ದುರ್ವರ್ತನೆ ತೋರಿದ ಆರೋಪದ ಮೇಲೆ ಅಸ್ಸಾಂನ ಬರ್ಪೆಟಾ ಪೊಲೀಸರು ಮರುಬಂಧಿಸಿದ್ದರು. 29 ರಂದು ನ್ಯಾಯಾಲಯದಿಂದ ಮತ್ತೆ ಜಾಮೀನು ಪಡೆದಿದ್ದ ಅವರು ಈ ವಾರವಷ್ಟೇ ಗುಜರಾತ್ಗೆ ಮರಳಿದ್ದರು.