ಹುಣಸೂರಲ್ಲಿ ವಿಶ್ವನಾಥ್‌ ಸೋಲಿಗೆ ಇವರೇ ಕಾರಣ – ಹೊಸ ಬಾಂಬ್‌ ಹಾಕಿದ ಜಿಟಿಡಿ

ಹುಣಸೂರಲ್ಲಿ ಅನರ್ಹ ಶಾಸಕ ಎಚ್‌ ವಿಶ್ವನಾಥ್‌ ಸೋಲಿಗೆ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್‌ ಕಾರಣ ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.

ಯೋಗೇಶ್ವರ್‌ ಹುಣಸೂರಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್‌ ವಿರುದ್ಧ ತಿರುಗಿಬಿದ್ದರು. ಅವನ್ಯಾರೋ ದೇವೇಗೌಡ, ಕುಮಾರಸ್ವಾಮಿ, ಜಿ ಟಿ ದೇವೇಗೌಡ ಎಂದೆಲ್ಲ ಮಾತಾಡಿದ್ದರು. ದುಡ್ಡು, ಸೀರೆ, ಕುಕ್ಕರ್‌ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಅವರಲಿತ್ತು. ೫ ಕೋಟಿ ರೂಪಾಯಿ ಆಮಿಷ ತೋರಿಸಿ ಒಕ್ಕಲಿಗ ನಾಯಕರನ್ನು ಓಲೈಸುವ ಪ್ರಯತ್ನ ಮಾಡಿದ್ದರು ಎಂದು ಹುಣಸೂರಿನ ಜಯಪುರಂದಲ್ಲಿ ಜಿಟಿಡಿ ವಾಗ್ದಾಳಿ ನಡೆಸಿದ್ದಾರೆ.

ಹುಣಸೂರಿನಲ್ಲಿ ವಿಶ್ವನಾಥ್ ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಎಂದು ಮೊದಲೇ ಹೇಳಿದ್ದೆ. ಅಂದಮೇಲೆ ಪಕ್ಷದ್ರೋಹಿ ಹೇಗಾಗುತ್ತೆ..? ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ. ಯೋಗೇಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ನಿರ್ಧಾರ ಕೈಗೊಂಡಿದ್ದಾನೆ.

ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ದೇವೇಗೌಡರು, ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ವಿ. ಆದ್ರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದ್ರು. ಗ್ರಾಮಗಳ ಒಳಗೆ ಬಿಟ್ಟು ಕೊಳ್ಳಲಿಲ್ಲ ಎಂದು ವಿಶ್ವನಾಥ್‌ ವಿರುದ್ಧ ಜಿಟಿದೇವೇಗೌಡ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಕಿಡಿ:

ಇನ್ನು ಜಿಟಿಡಿ ಫ್ಯೂಸ್‌ ಹೋಗಿದೆ ಎಂದ ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದರು. ಕುಮಾರಣ್ಣ ಮುತ್ತಿನಂತ ಮಾತು ಆಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ ಇತ್ತೀಚೆಗೆ ಆಡುತ್ತಿರುವ ಮಾತುಗಳು ಅಭಿಮಾನಿಗಳನ್ನೇ ಕೆರಳಿಸಿವೆ. ಕುಮಾರಸ್ವಾಮಿ ಅವರ ನಡೆಯೇ ಬೇರೆ, ನುಡಿಯೇ ಬೇರೆ ಆಗಿದೆ. ಅವರು ಅಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ. ಅವರು ಇನ್ನಾದರೂ ಬದಲಾಗಬೇಕು ಎಂದು ಜಿಟಿ ದೇವೇಗೌಡ ಹೇಳಿದರು.

LEAVE A REPLY

Please enter your comment!
Please enter your name here