ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ (Goutam Adani )ಜೆಟ್ ಸ್ಪೀಡ್ನಲ್ಲಿ ತನ್ನ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ. ಸರಿಯಾಗಿ 10 ವರ್ಷದ ಹಿಂದೆ ಮುಕೇಶ್ ಅಂಬಾನಿ ಸಂಪತ್ತಿನ ಆರನೇ ಒಂದರಷ್ಟು ಭಾಗದಷ್ಟು ಆಸ್ತಿ ಹೊಂದಿದ್ದ ಗೌತಮ್ ಅದಾನಿ, ಈಗ ಅಂಬಾನಿಯನ್ನು ಹಿಂದಿಕ್ಕಿ ತುಂಬಾ ಮುಂದಕ್ಕೆ ಹೋಗಿದ್ದಾರೆ. 10.94 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ವಿಶ್ವದ ಕುಬೇರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷಕ್ಕಿಂತ ಗೌತಮ್ ಅದಾನಿ ಸಂಪತ್ತು ಶೇಕಡಾ 116ರಷ್ಟು ಹೆಚ್ಚಿದೆ ಎಂದು ಐಐಎಫ್ಎಲ್ ವೆಲ್ತ್ (IIFL wealth )ತಿಳಿಸಿದೆ. ಅಂದರೇ ದಿನಕ್ಕೆ ಹೆಚ್ಚು ಕಡಿಮೆ 1612 ಕೋಟಿ ಎಂಬಂತೆ ವರ್ಷದಲ್ಲಿ ಅದಾನಿ ಆಸ್ತಿ ಮೌಲ್ಯ 5.88 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.
ದಿನಕ್ಕೆ 1612 ಕೋಟಿ ಸಂಪಾದಿಸಿದ ಪರಿಣಾಮ 10 ವರ್ಷಗಳಿಂದ ದೇಶದ ನಂಬರ್ 1 ಕುಬೇರ ಎನಿಸಿದ್ದ ಮುಕೇಶ್ ಅಂಬಾನಿಯನ್ನು (Mukesh Ambani)ಅದಾನಿ ಬದಿಗೆ ಸರಿಸಿದ್ದಾರೆ.
ಸದ್ಯ ಮುಕೇಶ್ ಅಂಬಾನಿ ಸಂಪತ್ತಿನ ಮೌಲ್ಯ 7.94 ಲಕ್ಷ ಕೋಟಿ. ಕಳೆದ ಒಂದು ವರ್ಷದಲ್ಲಿ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಶೇಕಡಾ 11ರಷ್ಟು ಹೆಚ್ಚಳ ಕಂಡುಬಂದಿದೆ. ಐದು ವರ್ಷದಲ್ಲಿ 115ರಷ್ಟು ಹೆಚ್ಚಾಗಿದೆ.
ಕೋವಿಡ್ ವ್ಯಾಕ್ಸಿನ್ ಮೂಲಕ ಸಿರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಸೈರಸ್ ಪೂನಾವಾಲ (Cyrus Poonawala)ಸಂಪತ್ತು ಕೂಡ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಪೂನಾವಾಲ ಆಸ್ತಿ ಶೇಕಡಾ 25ರಷ್ಟು ಹೆಚ್ಚಾಗಿದೆ.ಸದ್ಯ ಅವರ ಸಂಪತ್ತು 2.05 ಲಕ್ಷ ಕೋಟಿಗೇರಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಹೆಚ್ಸಿಎಲ್ ವ್ಯವಸ್ಥಾಪಕ ಶಿವನಾಡರ್ (HCL Siva Nadar ) 1,85,000 ಕೋಟಿ, ಡಿಮಾರ್ಟ್ (Dmart )ವ್ಯವಸ್ಥಾಪಕ ರಾಧಾಕೃಷ್ಣ ದಮಾನಿ (Radhakrishna Damani)1,75,000 ಕೋಟಿ, ವಿನೋದ್ ಶಾಂತಿಲಾಲ್ ಅದಾನಿ (Vinod shantilal Adani) 1,69,000 ಕೋಟಿ, ಎಸ್ಪಿ ಹಿಂದೂಜಾ ( SP Hinduja)1,65,000 ಕೋಟಿ, ಎಲ್ ಎನ್ ಮಿತ್ತಲ್ (LN Mittal)1,51,000 ಕೋಟಿ, ದಿಲೀಪ್ ಸಂಘ್ವಿ (Dilip Sanghvi)1,33,500 ಕೋಟಿ, ಉದಯ್ ಕೋಟಕ್ (Uday Kotak) 1,19,400 ಕೋಟಿ ಹೊಂದಿ ಟಾಪ್ 10 ಪಟ್ಟಿಯಲ್ಲಿದ್ದಾರೆ.
ನೈಕಾ (Nyka) ಒಡತಿ ಫಾಲ್ಗುಣಿ ನಾಯರ್ (Phalguni Nair ), ವೇದಾಂತ್ ಫ್ಯಾಷನ್ಸ್ (Vedant Fashions )ಮುಖ್ಯಸ್ಥ ರವಿ ಮೋದಿ (Ravi Modi)ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜೆಪ್ಟೋ (Zepto)ವ್ಯವಸ್ಥಾಪಕ, ಕೇವಲ 19 ವರ್ಷದ ಕೈವಲ್ಯ ವೊಹ್ರಾ (Kaivalya Vohra)ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕೈವಲ್ಯ ವೊಹ್ರಾ ಸಂಪತ್ತು 1000 ಕೋಟಿಗೂ ಹೆಚ್ಚಿದೆ.