GOOD STORY ಕೊರೋನಾ ರೋಗಿಗಾಗಿ ಪ್ರಾಣ ಪಣಕ್ಕಿಟ್ಟ ವೈದ್ಯ..

ಪ್ರಾಣಾಪಾಯ ಸ್ಥಿತಿಯಲ್ಲಿದ್ದ ಕೊರೋನಾ ಸೋಂಕಿತನನ್ನ ಉಳಿಸಿಕೊಳ್ಳಲು ವೈದ್ಯರೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ರೋಗಿಯನ್ನು ಕಾಪಾಡುವ ಭರದಲ್ಲಿ ತನ್ನ ಪ್ರಾಣ ರಕ್ಷಣೆಗೆ ಅಳವಡಿಸಿಕೊಂಡಿದ್ದ ಪಿಪಿಇ ಕಿಟ್ ಅನ್ನು ತೆಗೆದು ಹಾಕಿದ ವೈದ್ಯ, ಕೊನೆಗೂ ರೋಗಿಯನ್ನು ರಕ್ಷಣೆ ಮಾಡಿದ್ದಾರೆ.

ಮೇ 8ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೋಗಿಗಾಗಿ ಪ್ರಾಣ ಪಣಕ್ಕಿಟ್ಟ ವೈದ್ಯನ ಹೆಸರು ಜಹೀದ್ ಅಬ್ದುಲ್ ಮಜೀದ್. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯವರು.

ಘಟನೆ ನಡೆದಿದ್ದು ಹೀಗೆ..
ಕೊರೋನಾ ಸೋಂಕಿತರೊಬ್ಬರನ್ನು ಆಂಬ್ಯುಲೆನ್ಸ್‍ನಲ್ಲಿ ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‍ನ ಐಸಿಯುಗೆ ಸಾಗಿಸುವ ಜವಾಬ್ದಾರಿ ಈ ವೈದ್ಯರ ಮೇಲಿತ್ತು. ಪ್ರಯಾಣದ ವೇಳೆ ಸೋಂಕಿತ ವ್ಯಕ್ತಿ ಉಸಿರಾಡಲು ಕಷ್ಟ ಪಡ್ತಾ ಇದ್ದುದನ್ನು ವೈದ್ಯ ಮಜೀದ್ ಗಮನಿಸಿದರು. ಶ್ವಾಸ ತೆಗೆದುಕೊಳ್ಳಲು ಗಂಟಲಿಗೆ ಹಾಕಿದ್ದ ಟ್ಯೂಬ್ ಆಕಸ್ಮಿಕವಾಗಿ ಜಾರಿ ಹೋಗಿತ್ತು. ಅದನ್ನು ಯಥಾ ಸ್ಥಾನದಲ್ಲಿ ಇರಿಸಲು ಮಜೀದ್ ಪ್ರಯತ್ನ ಪಟ್ಟರು. ಆದರೆ, ಡಾ.ಮಜೀದ್ ಧರಿಸಿದ್ದ ಪಿಪಿಇ ಕಿಟ್‍ನಿಂದ ಇದು ಸಾಧ್ಯ ಆಗಲಿಲ್ಲ. ಜೊತೆಗೆ ಆಂಬ್ಯುಲೆನ್ಸ್‍ನಲ್ಲಿ ಬೆಳಕಿನ ಕೊರತೆ ಕೂಡ ಇತ್ತು.

ಹೀಗಾಗಿ ತಾನು ಧರಿಸಿದ್ದ ಪಿಪಿಇ ಕಿಟ್, ಫೇಸ್ ಮಾಸ್ಕ್, ಕನ್ನಡಕ ಕಿತ್ತೆಸೆದ ವೈದ್ಯ ಮಜೀದ್, ಸಕಾಲಕ್ಕೆ ರೋಗಿಗೆ ಟ್ಯೂಬ್‍ನ್ನು ಸರಿಯಾಗಿ ಅಳವಡಿಸಿದರು. ಕೊರೋನಾ ಸೋಂಕು ತಮಗೆ ತಗುಲಬಹುದು.. ಅಪಾಯ ಉಂಟಾಗಬಹುದು ಎಂಬುದನ್ನು ಅರಿತು ಕೂಡ, ತನ್ನ ಪ್ರಾಣವನ್ನು ಲೆಕ್ಕಿಸದೇ ಡಾ.ಮಜೀದ್ ರೋಗಿಯ ಪ್ರಾಣ ಉಳಿಸಿದರು ಎಂದು ಏಮ್ಸ್ ರೆಸಿಡೆಂಟ್ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾಜಕುಮಾರ್ ತಿಳಿಸಿದ್ದಾರೆ. ಡಾ.ಮಜೀದ್ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸದ್ಯ ಡಾ.ಮಜೀದ್ ಅವರನ್ನು 14 ದಿನಗಳ ಕಾಲ ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ.

LEAVE A REPLY

Please enter your comment!
Please enter your name here