ಬೆಂಗಳೂರು : ಇನ್​ಸ್ಟಾಗ್ರಾಂನಲ್ಲಿ ಹುಡುಗಿಯರ ಬ್ಲಾಕ್​ಮೇಲ್ – 21 ವರ್ಷದ ವಿದ್ಯಾರ್ಥಿಯ ಬಂಧನ

ಇನ್​ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಲೆಸ್ಬಿಯನ್ ಆಗಿ ನಟಿಸಿ ವಿದ್ಯಾರ್ಥಿನಿಯರನ್ನು ಬ್ಲಾಕ್​ ಮೇಲ್ ಮಾಡುತ್ತಿದ್ದ ಬೆಂಗಳೂರಿನ 21 ವರ್ಷದ ಬಿ.ಎಸ್​.ಸಿ ವಿದ್ಯಾರ್ಥಿಯನ್ನು ಇಂದು ಶುಕ್ರವಾರ (ಜ.14) ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಪಂಚ್ ನಾಚಪ್ಪ ಬಂಧಿತನಾಗಿರುವ ವಿದ್ಯಾರ್ಥಿ. ಬೆಂಗಳೂರಿನ ಪ್ರೆಸರ್ ಟೌನ್​ನ ನಿವಾಸಿಯಾಗಿರುವ ಈತ 2021 ರ ಸೆಪ್ಟಂಬರ್​ನಲ್ಲಿ ಪ್ರತಿಕ್ಷಾ ಬೋಹ್ರಾ ಹೆಸರಿನಲ್ಲಿ ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದಿದ್ದ.

ಈತ ಲೆಸ್ಬಿಯನ್​ನಂತ ನಟಿಸಿ ಯುವತಿಯರನ್ನು ಹುಡುಕುತ್ತಿದ್ದ. ಮಹಿಳೆಯರು ವಿಶೇಷವಾಗಿ ವಿದ್ಯಾರ್ಥಿನಿಯರೊಂದಿಗೆ ಚಾಟಿಂಗ್​ ಮಾಡುತ್ತಾ, ಅವರಿಗೆ ನಂಬಿಕೆ ಬಂದ ಮೇಲೆ ಬೆತ್ತಲೆ ಫೋಟೋಗಳನ್ನು ಹಾಕಿಸಿಕೊಳ್ಳುತ್ತಿದ್ದ. ಅನಂತರ ಆ ಯುವತಿಯರನ್ನು ಬ್ಲಾಕ್​ಮೇಲ್​ ಮಾಡುತ್ತಿದ್ದ. ಹಣ ನೀಡದೇ ಇದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡುವ ಬೆದರಿಕೆ ಹಾಕುತ್ತಿದ್ದ.

ಪೊಲೀಸರ ಮಾಹಿತಿ ಪ್ರಕಾರ ನಾಚಪ್ಪ ತಾನು ಮಾಡೆಲ್ ಆಗಿದ್ದು, ಮಾಡಲ್ ಆಗುವವರಿಗೆ ಸಹಾಯ ಮಾಡುತ್ತೇನೆ ಎಂದು ಸಂತ್ರಸ್ತರಿಗೆ ಪರಿಚಯ ಮಾಡಿಕೊಳ್ಳುತ್ತಿದ್ದ. 30 ರಿಂದ 40 ಸಂತ್ರಸ್ತರಿಂದ ಸುಮಾರು 2 ಲಕ್ಷದವರೆಗೆ ವಸೂಲಿ ಮಾಡಿದ್ದಾನೆ ಎಂದು ಹೇಳಿದ್ದಾರೆ. ನಿಖರ ಹಣದ ಮಾಹಿತಿಗಾಗಿ ಪೊಲೀಸರು ಈತನ ಬ್ಯಾಂಕ್ ಖಾತೆಯನ್ನು ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರೊಬ್ಬರು ಮಾತನಾಡಿ, ನಾಚಪ್ಪ ಸಾಮಾಜಿಕ ಜಾಲತಾಣದಲ್ಲಿ ಲೆಸ್ಬಿಯನ್​ನಂತೆ ನಟಿಸಿ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಅನಂತರ ಅವರ ಬೆತ್ತಲೆ ಫೋಟೋಗಳನ್ನು ಪಡೆದುಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದ್ದಾರೆ.

ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪ್ರಪಂಚ್ ನಾಚಪ್ಪನನ್ನು ಬಂಧಿಸಿದ್ದಾರೆ. ಈತನ ಬಗ್ಗೆ ಇನ್ನು ವಿಚಾರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here