ರಕ್ಷಿತ್ ಶೆಟ್ಟಿ ನಾಯಕ ನಟನೆಯ ‘777 ಚಾರ್ಲಿ’ ಸಿನೆಮಾ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೈಲರ್ ಈಗಾಗಲೇ ಪ್ರೇಕ್ಷಕರ ಮನಸೂರೆಗೊಂಡಿದೆ. ಕಿರಣ್ ರಾಜ್ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ಗುರುರಾಜ್ ಶೆಟ್ಟಿಯವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಚಿತ್ರವನ್ನು ನೋಡಿರುವ ಕಲರ್ಸ್ ಕನ್ನಡದ ಬ್ಯುಸಿನೆಸ್ ಬ್ಯೂರೋ ಹೆಡ್ ಪರಮೇಶ್ವರ್ ಗುಂಡ್ಕಲ್, 777 ಚಾರ್ಲಿ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಚಿತ್ರ ನೋಡಿ ಅಭಿಪ್ರಾಯ ಹಂಚಿಕೊಂಡಿತುವ ಅವರು, ರಕ್ಷಿತ್ ಶೆಟ್ಟಿ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನೆಮಾ ಪ್ಲಸ್ ಪಾಯಿಂಟ್ ಎಂದಿದ್ದಾರೆ.
ಇನ್ನು, ಇದೇ ಸಮಯದಲ್ಲಿ ಬಾಲ್ಯದ ಪ್ರಾಣಿ ಪ್ರೀತಿಯನ್ನ ನೆನಪಿಸಿಕೊಂಡಿರುವ ಅವರ ಬರಹ ಇಲ್ಲಿದೆ.
ನಮ್ಮನೆ ಕೊಟ್ಟಿಗೆಯಲ್ಲಿ ಎರಡು ಹಸುಗಳಿದ್ವು. ಒಬ್ಬಳ ಹೆಸರು ಗೌರಿ. ಇನ್ನೊಬ್ಬಳ ಹೆಸರು ಕಾಳಿ. ಈ ಹೆಸರುಗಳನ್ನು ಇಟ್ಟಿದ್ದು ಆಯಿ. ಈ ಹಸುಗಳು ಬೆಳಿಗ್ಗೆ ಹೋಗಿ ಬೆಟ್ಟ ಗುಡ್ಡಗಳನ್ನೆಲ್ಲಾ ಸುತ್ತಾಡಿ ಹುಲ್ಲು ತಿಂದು ಸಂಜೆ ಬರುತ್ತಿದ್ದವು. ಗೌರಿ ಒಂದು ಥರದ ಆಕಳು. ಕಂದು ಬಣ್ಣ. ಕಾಳಿ ಇನ್ನೊಂದು ಥರ. ಕಪ್ಪು ಬಣ್ಣ. ಸಿಟ್ಟು, ಹೊಟ್ಟೆಕಿಚ್ಚು ಮತ್ತು ಅಹಂಕಾರ ಗೌರಿಗೆ ಒಂಚೂರೂ ಇರಲಿಲ್ಲ. ಹಾಲು ಹಿಂಡೋದು ಹಾಲು ಕುಡಿಯೋದಕ್ಕಿಂತ ಸುಲಭ. ಇನೊಂದು ಕಡೆ ಕಾಳಿ ಆಳದಲ್ಲಿ ಸಿಕ್ಕಾಪಟ್ಟೆ ಸಿಟ್ಟು ಇಟ್ಟುಕೊಂಡಿದ್ದ ಆಕಳು. ಹಾಲು ಹಿಂಡುವುದಕ್ಕೆ ದಿನಾಲೂ ಲೀಟರುಗಟ್ಟಲೇ ಹಾಲು ಕುಡಿದು ವ್ಯಾಯಾಮ ಮಾಡಿದವರೇ ಬೇಕಾಗಿತ್ತು.
ಮಲೆನಾಡಿನ ಒಂದು ಮಳೆಗಾಲದ ಬೆಳಿಗ್ಗೆ ಹುಲ್ಲು ಮೇಯಲು ಹೋದ ಗೌರಿ ಮತ್ತು ಕಾಳಿ ಸಂಜೆ ವಾಪಸ್ ಬರಲಿಲ್ಲ. ನಮಗೆಲ್ಲಾ ಆತಂಕ. ಜಿನುಗುತ್ತಿರುವ ಮಳೆ. ಕತ್ತಲು. ಟಾರ್ಚ್ ಹಿಡಿದುಕೊಂಡು ರಾತ್ರಿಯೆಲ್ಲಾ ಬೆಟ್ಟ ಗುಡ್ಡ ಹುಡುಕಿದೆವು. ಕಣಿವೆಯೊಂದರಲ್ಲಿ ಆಕಳೊಂದು ಬಿದ್ದಿರುವುದನ್ನು ನೋಡಿರುವುದಾಗಿ ದಾರಿಯಲ್ಲಿ ಸಿಕ್ಕಿದ ಕೆಲಸದವನೊಬ್ಬ ಹೇಳಿದ. ಗೌರಿಯನ್ನು ತುಂಬಾ ಇಷ್ಟಪಡುತ್ತಿದ್ದ ನನಗೆ ಬಿದ್ದಿರುವ ಆಕಳು ಕಾಳಿ ಆಗಿರಲಿ ಅಂತ ತುಂಬಾ ಅನಿಸಿತ್ತು. ಆದರೆ ಬಿದ್ದಿರುವುದು ಗೌರಿ ಎಂದು ಹೋಗಿ ನೋಡಿದಾಗ ಗೊತ್ತಾಯಿತು. ಗೌರಿ ನಮ್ಮನ್ನು ಬಿಟ್ಟು ಹೋಗಿದ್ದಳು. ಮನಸಲ್ಲೇ ಕಾಳಿಯನ್ನು ಮುಗಿಸಿಯಾಗಿತ್ತು. ಗೌರಿಯ ವಿದಾಯ, ಮನಸಲ್ಲೇ ನಡೆಸಿದ ಗೋಹತ್ಯೆಯಿಂದ ಹುಟ್ಟಿಕೊಂಡ ಪಾಪಪ್ರಜ್ಞೆಯಿಂದ ಆ ರಾತ್ರಿ ಇಡೀ ನಿದ್ದೆ ಬರಲಿಲ್ಲ! ಈ ಘಟನೆ ಎದೆಯ ಆಳದ ತನಕ ಮಾಡಿದ ಗಾಯ ಎಷ್ಟೋ ವರ್ಷಗಳ ನಂತರ ಇನ್ನೂ ಹಾಗೇ ಇದೆ. ಇದಾದ ಮೇಲೆ ಯಾವ ಪ್ರಾಣಿಯನ್ನೂ ಮನಸ್ಸಿಗೆ ಹಚ್ಚಿಕೊಂಡು ಪ್ರೀತಿ ಮಾಡುವುದು ಸಾಧ್ಯವಾಗಲಿಲ್ಲ!
ನಾಯಿಯ ಜೊತೆ ಮಾಡಿದ ಸಿನಿಮಾ ಚಾರ್ಲಿಯನ್ನು ನೋಡುವುದಕ್ಕೆ ರಕ್ಷಿತ್ ಶೆಟ್ಟಿಯವರು ಕರೆದಾಗ ಈ ಗಾಯ ಮಾಡಿದ ನೋವು ನೆನಪಾಯಿತು. ಸಾಕು ಪ್ರಾಣಿಗಳನ್ನು ಅಷ್ಟಾಗಿ ಇಷ್ಟಪಡದೇ ಇರುವುದರಿಂದ ಸಿನಿಮಾ ಹೇಗನಿಸುತ್ತದೋ ಎಂಬ ಗೊಂದಲ. ಆದರೆ ಚಾರ್ಲಿ ಸಿನಿಮಾ ಕೊಟ್ಟಿದ್ದು ಒಂದು ಹಿತವಾದ ಅನುಭವ. ಮನಸ್ಸನ್ನು ತೀವ್ರವಾಗಿ ಅಲ್ಲಾಡಿಸುವ ಯಾವುದೇ ಕತೆ ಒಳ್ಳೆಯದಾಗಿರಲೇ ಬೇಕು!
ಕಿರಣ್ ರಾಜ್ ಎಂಬ ಕತೆಗಾರ, ನಿರ್ದೇಶಕ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಕೊಡಬಹದು ಎಂಬ ಭರವಸೆ ಕೊಟ್ಟಿದ್ದು ಚಾರ್ಲಿ. ಐದು ವರ್ಷಗಳ ಶ್ರಮ, ಸಿನಿಮಾ ಪ್ರೀತಿ, ಸೂಕ್ಷ್ಮ ಅವಲೋಕನ ಮತ್ತು ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂಬ ಸ್ಪಷ್ಟತೆ ಕಾಸರಗೋಡಿನ ಈ ಹುಡುಗನನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಲಿಕ್ಕಿದೆ ಅನಿಸಿತು. ರಕ್ಷಿತ್ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನಿಮಾದ ಪ್ಲಸ್ ಪಾಯಿಂಟ್ಸ್.
ಜಗತ್ತಿನಾದ್ಯಂತ ಕನ್ನಡ ಸಿನಿಮಾ ಸದ್ದು ಮಾಡುತ್ತಿರುವ ಹೆಮ್ಮೆಯ ಸಂದರ್ಭದಲ್ಲಿ ಪ್ರಾಮಾಣಿಕವಾದ ಕತೆಯಿಂದ ಚಾರ್ಲಿ ನಮ್ಮ ಸಂತೋಷವನ್ನು ಹೆಚ್ಚು ಮಾಡೋದಕ್ಕಿದೆ. ಅಭಿನಂದನೆಗಳು. ಮೊದಲ ಸಿನಿಮಾದಲ್ಲೇ ಎಲ್ಲವನ್ನೂ ಸರಿಯಾಗಿ ಮಾಡಿಬಿಟ್ಟರೆ ಮುಂದಿನ ಸಿನಿಮಾದಲ್ಲಿ ಏನು ಮಾಡ್ತೀರಿ ಕಿರಣ್ ರಾಜ್? ಎಂದು ಪರಮೇಶ್ವರ್ ಗುಂಡ್ಕಲ್ 777 ಚಾರ್ಲಿ ಸಿನೆಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ADVERTISEMENT
ADVERTISEMENT