ಕೆಆರ್ ಪೇಟೆ ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು ಯಶಸ್ವಿ ಆಗಿದೆ ಎಂದು ಸ್ಥಳೀಯ ಶಾಸಕರೂ ಆದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಕೆಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿಯಿಂದ ಆರಂಭವಾದ ಹೋಬಳಿ ಮಟ್ಟದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರ ಇಂದು ಕೆಆರ್ ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಸಬಾ ಹೋಬಳಿಯ ಮಟ್ಟದ ಯಶಸ್ವಿಯಾಗಿ ನಡೆದಿದೆ.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಕೆಆರ್ ಪೇಟೆಯ ಆರು ಹೋಬಳಿಯಲ್ಲಿ ನೇತ್ರ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಗ್ರಾಮಗಳಿಂದಲೂ ಸಾವಿರಾರು ಜನರು ಆಗಮಿಸಿ ತಪಾಸಣೆ ಮಾಡಿಸಿದ್ದಾರೆ. ಅಗತ್ಯವಿರುವವರಿಗೆ ಆದಿಚುಂಚನಗಿರಿ ಮಹಾ ವೈದ್ಯಕೀಯ ಮಹಾವಿದ್ಯಾಲಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದ್ದು, ಜುಲೈ 21 ರಂದು ಸುಮಾರು 15 ಸಾವಿರ ಉಚಿತ ಕನ್ನಡಕಗಳನ್ನು ವಿತರಿಸಲಾಗುತ್ತದೆ.
ಮಾರ್ಚ್ ನಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಹೆಚ್ಚಿನ ಕಣ್ಣಿನ ಸಮಸ್ಯೆ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹೋಬಳಿವಾರು ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಅಗತ್ಯಬಿದ್ದರೇ ಗ್ರಾಮವಾರು ಕೂಡ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ತಾಲೂಕಿನ ಅಭಿವೃದ್ಧಿ ಬಿಟ್ಟು ಬೇರೆ ಏನೂ ಯೋಚನೆ ನನಗಿಲ್ಲ. ಯಾವುದೇ ಟೀಕೆ ಟಿಪ್ಪಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಆರ್ ಪೇಟೆ ತಾಲೂಕಿನಲ್ಲಿ ಒಂದೇ ಒಂದು ಕೆರೆ ಕಟ್ಟೆ ಬಿಡದಂತೆ ತುಂಬಿಸಲು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಇದೇ ವೇಳೆ ಸಂತೆಬಾಚಹಳ್ಳಿ ವ್ಯಾಪ್ತಿಯಲ್ಲಿ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸಚಿವ ಡಾ.ನಾರಾಯಣಗೌಡ ಅವರು ವಿತರಿಸಿದರು.