Karnataka: ಮಹಿಳೆಯರ ಶಕ್ತಿಗೆ ಒಂದು ತಿಂಗಳು- ಎಷ್ಟು ಮಂದಿ ಪ್ರಯಾಣ, ಆದಾಯ ಬಂದಿದ್ದೆಷ್ಟು..?

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆ ಶಕ್ತಿಗೆ ಇವತ್ತು ಒಂದು ತಿಂಗಳು.

ಕೆಎಸ್​ಆರ್​ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾದ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ಉಚಿತವಾಗಿ ಪ್ರಯಾಣಿಸಿದ ಮಹಿಳೆಯರೆಷ್ಟು..?

ಕೆಎಸ್​ಆರ್​ಟಿಸಿ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ ನಾಲ್ಕೂ ನಿಗಮಗಳ ಬಸ್​ಗಳಲ್ಲಿ ಜೂನ್​ 11ರಿಂದ ಜುಲೈ 10ರ ಮಧ್ಯರಾತ್ರಿವರೆಗೆ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ 32 ಕೋಟಿ 89 ಲಕ್ಷ. ಇವರಲ್ಲಿ ಮಹಿಳಾ ಪ್ರಯಾಣಿಕರು 16 ಕೋಟಿ 73 ಲಕ್ಷ. 

ಕೆಎಸ್​ಆರ್​ಟಿಸಿಯಲ್ಲಿ 5 ಕೋಟಿ 9 ಲಕ್ಷ, ಬಿಎಂಟಿಸಿಯಲ್ಲಿ 5 ಕೋಟಿ 38 ಲಕ್ಷ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4 ಕೋಟಿ 2 ಲಕ್ಷ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2 ಕೋಟಿ 23 ಲಕ್ಷದಷ್ಟು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಒಂದು ತಿಂಗಳಲ್ಲಿ ಆದಾಯದ ಶಕ್ತಿ:

ಈ ನಾಲ್ಕು ನಿಗಮಗಳಲ್ಲಿ 1 ತಿಂಗಳ ಅವಧಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದಿಂದ 401 ಕೋಟಿ 94 ಲಕ್ಷ ರೂಪಾಯಿ ಆದಾಯ ಬಂದಿದೆ.

ಕೆಎಸ್​ಆರ್​​ಟಿಸಿಗೆ 151 ಕೋಟಿ 25 ಲಕ್ಷ ರೂಪಾಯಿ, ಬಿಎಂಟಿಸಿಗೆ 69 ಕೋಟಿ 56 ಲಕ್ಷ ರೂಪಾಯಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 103 ಕೋಟಿ 51 ಲಕ್ಷ ರೂಪಾಯಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 77 ಕೋಟಿ 62 ಲಕ್ಷ ರೂಪಾಯಿ ಆದಾಯ ಬಂದಿದೆ.

ಬಜೆಟ್​ನಲ್ಲಿ 4 ಸಾವಿರ ಕೋಟಿ, ನಿಗಮಗಳಿಗೆ ಶಕ್ತಿ:

ಶಕ್ತಿ ಯೋಜನೆ ಜಾರಿಗಾಗಿಯೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ನಲ್ಲಿ 4 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಟ್ಟಿದ್ದಾರೆ. ಉಚಿತ ಪ್ರಯಾಣದ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ನೀಡುವ ಹಿನ್ನೆಲೆಯಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಪ್ರತಿ ದಿನದ ಶಕ್ತಿ ಆದಾಯ:

ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ 423, ಬಿಎಂಟಿಸಿ 238, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 986 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1,500 ಹೆಚ್ಚುವರಿ ಟ್ರಿಪ್​ಗಳನ್ನೂ ಮಾಡಿದೆ.

ಪ್ರತಿ ದಿನ ಕೆಎಸ್​ಆರ್​ಟಿಸಿಯಲ್ಲಿ 16 ಲಕ್ಷದ 97 ಸಾವಿರ, ಬಿಎಂಟಿಸಿಯಲ್ಲಿ 17 ಲಕ್ಷದ 95 ಸಾವಿರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 13 ಲಕ್ಷದ 42 ಸಾವಿರ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 7 ಲಕ್ಷದ 43 ಸಾವಿರ ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ಇನ್ನು ಪ್ರತಿದಿನ ಶಕ್ತಿ ಯೋಜನೆಯಡಿ ಕೆಎಸ್​ಆರ್​ಟಿಸಿಗೆ 5 ಕೋಟಿ 4 ಲಕ್ಷ ರೂಪಾಯಿ, ಬಿಎಂಟಿಸಿಗೆ 2 ಕೋಟಿ 32 ಲಕ್ಷ ರೂಪಾಯಿ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 3 ಕೋಟಿ 45 ಲಕ್ಷ ರೂಪಾಯಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 2 ಕೋಟಿ 59 ಲಕ್ಷ ರೂಪಾಯಿ ಆದಾಯ ಬರುತ್ತಿದೆ.

LEAVE A REPLY

Please enter your comment!
Please enter your name here