ರಾಜ್ಯಾದ್ಯಂತ ಹಿಜಾಬ್ ನಿಷೇಧ ವಿಚಾರ ಭಾರೀ ಚರ್ಚೆಗೆ ಗುರಿಯಾಗಿರುವ ಮಧ್ಯೆಯೇ, ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ ಅಂತ ಹೇಳಿಕೆ ಕೊಡುವ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಚ್ಚರಿ ಮೂಡಿಸಿದ್ದಾರೆ.
ಎಲ್ಲಿ ಡ್ರೆಸ್ ಕೋಡ್ ಇದೆ ಅಲ್ಲಿ ಮಾತ್ರ ಹಿಜಾಬ್ ಧರಿಸಲು ನಿಷೇಧ ಇದೆ. ಮಹಿಳೆಯರು ಎಲ್ಲಿ ಬೇಕು ಅಲ್ಲಿ ಹಾಕಿಕೊಂಡು ಓಡಾಡುತ್ತಿದ್ದಾರೆ. ಹಿಜಾಬ್ ನಿಷೇಧ ಆಗಿಯೇ ಇಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು 1984 ರಲ್ಲಿ ಸಮಗ್ರ ಶಿಕ್ಷಣ ಕಾಯ್ದೆ ಅಡಿ ಡ್ರೆಸ್ ಕೋಡ್ ಮಾಡಲಾಗಿದ್ದು, ಅದನ್ನು ಹಿಂದಪಡೆಯುವ ಮಾತನಾಡಿದ್ದಾರೆ. ಈಗಾಗಲೇ ಕೊರ್ಟ್ ನಲ್ಲಿ ಪ್ರಕರಣ ಇದೆ. ರಾಜಕೀಯ ಕಾರಣಕ್ಕೆ ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಶಾಲಾ ಮಕ್ಕಳಲ್ಲಿ ಒಡಕು ಒಂಟು ಮಾಡುವ ಉದ್ದೇಶ ಇದರಲ್ಲಿ ಇದೆ. ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ತಾವು ಯಾವ ಧರ್ಮಕ್ಕೆ ಸೇರಿವೆಂಬ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ. ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ಇದ್ದಾಗ ಈ ಬಗ್ಗೆ ಹೇಳಿಕೆ ನೀಡುವ ಅಗತ್ಯವೇನಿತ್ತು. ಕೋರ್ಟ್ ಈ ಬಗ್ಗೆ ಗಮನ ಹರಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ನಿಷೇಧ ಹೇರಲಾಗಿತ್ತು. ಅಲ್ಲದೆ ಈ ಬಗ್ಗೆ ಬೊಮ್ಮಾಯಿ ಸರ್ಕಾರವೇ ೨೦೨೨ರ ಫೆಬ್ರವರಿ ತಿಂಗಳಿನಲ್ಲಿ ಕಾರ್ಯಾದೇಶ ಹೊರಡಿಸಿತ್ತು. ಇವರ ಅವಧಿಯಲ್ಲೇ ಹಿಜಾಬ್ ಧರಿಸೋ ಕುರಿತಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ತೀರ್ಪುಗಳೂ ಪ್ರಕಟಗೊಂಡಿದ್ದವು.