ಹಿಮಾಚಲ ಪ್ರದೇಶದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಕಿಮಿ ರಾಮ್ ಶರ್ಮಾ ಅವರು ಇಂದು ದೆಹಲಿಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಕಿಮಿ ರಾಮ್ ಶರ್ಮಾ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, 2017 ರಲ್ಲಿ ಇವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದಾಗಿ ಬೇಸರಗೊಂಡಿದ್ದ ಅವರು ಇಂದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಾಜೀವ್ ಶುಕ್ಲಾ ಅವರ ಸಮ್ಮುಖದಲ್ಲಿ ‘ಕೈ’ ಹಿಡಿದರು.
2007 ರ ಚುನಾವಣೆಯಲ್ಲಿ ಬಂಜಾರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 200 ರಲ್ಲಿ ಅವಿರೋಧವಾಗಿ ಉಪಸ್ಪೀಕರ್ ಆಗಿ ಆಯ್ಕೆಯಾಗಿದ್ದರು. 2009 ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು. ಅನಂತರ 2011 ರಲ್ಲಿ ಅರಣ್ಯ ಇಲಾಖೆ ಸಚಿವರಾಗಿ ನೇಮಕವಾಗಿದ್ದರು.
ಆದರೆ, ಇವರು 2012 ರಲ್ಲಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಇದರಿಂದಾಗಿ ಇವರಿಗೆ 2017 ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು.
ಸೆಪ್ಟಂಬರ್ 1, 2021 ರಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದ ಇವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಇದೀಗ ಕಿಮಿ ರಾಮ್ ಶರ್ಮಾ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇವರು 2022 ರಲ್ಲಿನ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಾರೆ ಎನ್ನಲಾಗುತ್ತಿದೆ.
ಪ್ರಸ್ತುತ, ಹಿಮಾಚಲ ಪ್ರದೇಶದಲ್ಲಿ ಜೈ ರಾಂ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ.