ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಅವಹೇಳನಕಾರಿಯಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಮರಾಠಿ ನಟಿ ಕೇತಕಿ ಚಿತಾಲೆ ಅವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.
ಮರಾಠಿಯಲ್ಲಿ ಬೇರೊಬ್ಬರು ಬರೆದಿದ್ದ ಪೋಸ್ಟ್ ನ್ನು ಮರಾಠಿ ನಟಿ ಹಂಚಿದ್ದರು. ಅದರಲ್ಲಿ ಪವಾರ್ ಅವರ ಉಪನಾಮ ಹಾಗೂ ವಯಸ್ಸನ್ನು ಉಲ್ಲೇಖಿಸಲಾಗಿತ್ತು.
ನಿಮಗಾಗಿ ನರಕ ಕಾಯುತ್ತಿದೆ, ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ ಎಂಬ ಶಬ್ದಗಳನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಕಲ್ವಾ ಪೊಲೀಸ್ ಠಾಣೆಯಲ್ಲಿ ಚಿತಾಲೆ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ವಪ್ನಿಲ್ ನಿತ್ಕೆ ಎಂಬುವವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಐಪಿಸಿ ಸೆಕ್ಷನ್ 500ರ ಪ್ರಕಾರ ಮಾನನಷ್ಟ ಮೊಕದ್ದಮೆ, 501 ರ ಪ್ರಕಾರ ಮಾನನಷ್ಟ ಉಂಟುಮಾಡುವಂತಹ ವಿಷಯಗಳನ್ನು ಮುದ್ರಿಸುವುದು ಅಥವಾ ಹರಡುವುದು, 505 ರ ಪ್ರಕಾರ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.