ಜಯದೇವ ಆಸ್ಪತ್ರೆಯ ನಿರ್ದೇಶಕರನ್ನಾಗಿ ಡಾ.ಸಿಎನ್.ಮಂಜುನಾಥ್ ಅವರ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಮುಖ್ಯಮಂತ್ರಿಯವರೇ ಸ್ವತಃ ಡಾ.ಸಿಎನ.ಮಂಜುನಾಥ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಾಳೆ ಮಂಗಳವಾರ ಜುಲೈ 19 ರಂದು ಅವರಿಗೆ 65 ವರ್ಷ ಪೂರ್ಣವಾಗುವ ಹಿನ್ನೆಲೆಯಲ್ಲಿ, ಅವರ ಅಧಿಕಾರಾವಧಿಯೂ ಮುಕ್ತಾಯವಾಗುತ್ತಿತ್ತು.
ಡಾ.ಸಿಎನ್.ಮಂಜುನಾಥ್ ಅವರನ್ನೇ ಜಯದೇವ ಆಸ್ಪತ್ರೆಯ ನಿರ್ದೇಶಕರನ್ನಾಗಿ ಮುಂದುವರೆಸಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳು ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದರು. ಅಲ್ಲದೇ, ಮಂಗಳವಾರ ಆಸ್ಪತ್ರೆಯ ಒಪಿಡಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಮಂಜುನಾಥ್ ಅವರನ್ನೇ ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು.
ಸುಧಾಮೂರ್ತಿಯವರು ಸೇರಿದಂತೆ ಇತರೆ ಗಣ್ಯರು ಖುದ್ದಾಗಿ ಮುಖ್ಯಮಂತ್ರಿಯವರಿಗೇ ಕರೆ ಮಾಡಿ ಮುಂಜುನಾಥ್ ಅವರನ್ನ ಮುಂದುವರೆಸುವಂತೆ ಒತ್ತಾಯಿಸಿದ್ದರು.
ಇದೀಗ, ಸರ್ಕಾರ ಡಾ.ಸಿಎನ್.ಮಂಜುನಾಥ್ ಅವರ ಅವಧಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.