ಪ್ರವಾದಿ ಮಹಮ್ಮದ್ರ ಬಗ್ಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ದೇಶ ವಿದೇಶಗಳಲ್ಲಿ ವ್ಯಾಪಕ ವಿವಾದ ಸೃಷ್ಟಿಸಿದೆ. ಅನೇಕ ಮುಸ್ಲಿಂ ರಾಷ್ಟ್ರಗಳು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರೆ, ನೂಪುರ್ ಶರ್ಮಾ ಬಂಧಿಸಬೇಕು ಎಂದು ಭಾರತದಲ್ಲಿ ಮುಸ್ಲಿಂ ಸಮುದಾಯದವರು ಅಲ್ಲಿಲ್ಲಿ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಕೆಲವೆಡೆ ಹಿಂಸಾಚಾರಕ್ಕೂ ತಿರುಗಿದೆ.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದಿಂದ ಗಡಿಪಾರಾಗಿರುವ ಮುಸ್ಲಿಂ ಲೇಖಕಿ ತಸ್ಲಿಮಾ ನಸ್ರಿನ್ ಅವರು, ‘ಪ್ರವಾದಿ ಮಹಮ್ಮದ್ ಇಂದು ಬದುಕಿದ್ದರೆ, ಈ ಜಗತ್ತಿನಲ್ಲಿ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಬೆಚ್ಚಿ ಬೀಳುತ್ತಿದ್ದರು’ ಎಂದು ಹೇಳಿದ್ದಾರೆ.
ಆ ಮೂಲಕ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಂ ಸಮುದಾಯದ ನಡೆಯನ್ನು ಲೇಖಕಿ ಖಂಡಿಸಿದ್ದಾರೆ.
Even if prophet Muhammad was alive today, he would have been shocked to see the madness of the Muslim fanatics around the world.
— taslima nasreen (@taslimanasreen) June 10, 2022
ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರು ಇಸ್ಲಾಂ ಮೂಲಭೂತವಾದ ಹಾಗೂ ಮಹಿಳೆಯರ ಬಗೆಗಿನ ಧೋರಣೆಯ ಬಗ್ಗೆ ಪ್ರಶ್ನಿಸುತ್ತಲೇ ಬಂದಿದ್ದಾರೆ. ಮುಸ್ಲಿಂ ಮೂಲಭೂತವಾದ ವಿರೋಧಿಸಿ ಲಜ್ಜಾ ಎಂಬ ಪುಸ್ತಕ ಬರೆದಿದ್ದ ಇವರು ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರಿಂದಾಗಿ ಇವರನ್ನು 1994 ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಗಿತ್ತು.
ಈ ಟ್ವೀಟ್ಗೂ ಮುನ್ನ ಟ್ವೀಟ್ ಮಾಡಿದ್ದ ಅವರು ವಿಮರ್ಶೆಗೆ ಯಾರೂ ಅತೀತರಲ್ಲ. ಅದು ದೇವರಾಗಿರಬಹುದು, ಸಂತನಾಗಿರಬಹುದು, ಪ್ರವಾದಿಯೇ ಆಗಿರಬಹುದು ಎಂದು ಹೇಳಿದ್ದರು.
ಇನ್ನೊಂದೆಡೆ ನೂಪುರ್ ಶರ್ಮಾ ಅವರ ವಿರುದ್ಧ ದೇಶದ ಹಲವೆಡೆ ಭಾರೀ ಪ್ರತಿಭಟನೆಗಳನ್ನು ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪ್ರಯಾಗರಾಜ್ ಹಾಗೂ ರಾಂಚಿಯಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿವೆ. ಶರ್ಮಾ ವಿರುದ್ಧ ಕೆಲವರು ಜೀವ ಬೆದರಿಕೆ ಹಾಕಿದ್ದರೆ, ಇನ್ನೂ ಕೆಲವರು ಅನೇಕ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ರಾಂಚಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.