ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘ ಸಚಿವಾಲಯ ಬಂದ್ಗೆ ಕರೆ ನೀಡಿದ್ದು, ಕೂಡಲೇ ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿವೆ.
ಇಂದು ವಿಧಾನಸೌಧ ಹಾಗೂ ಬಹುಮಹಟಿ ಕಟ್ಟಡಗಳ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಬಂದ್ಗೆ ಕರೆ ನೀಡಿದ್ದಾರೆ. ಇದರಿಂದಾಗಿ ಒಂದು ದಿನದ ಮಟ್ಟಿಗೆ ವಿಧಾನಸೌಧ ಹಾಗೂ ಬಹುಮಹಡಿ ಕಟ್ಟಡಗಳ ಕಛೇರಿಗಳಲ್ಲಿ ಕೆಲಸಗಳು ಸ್ಥಗಿತಗೊಳ್ಳಬಹುದು ಎನ್ನಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಆಡಳಿತ ಸುಧಾರಣೆ ನೆಪದಲ್ಲಿ ಸಚಿವಾಲಯದ ಹಲವು ಶಾಖೆಗಳನ್ನು ವಿಲೀನ ಅಥವಾ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ನಿವೃತ್ತಿಯಾದ ಅಧಿಕಾರಿ, ನೌಕರರ ಮರು ನೇಮಕಾತಿಯನ್ನು ರದ್ದು ಮಾಡಬೇಕು.
542 ಕಿರಿಯ ಸಹಾಯಕರ ಹುದ್ದೆಗಳ ಕಡಿತ ಪ್ರಸ್ತಾವನೆ ಕೈಬಿಡಬೇಕು. ಸಚಿವಾಲಯದ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರ ಇಲಾಖೆಗೆ ಹೋಗುವ ಅವಕಾಶ ನೀಡಬೇಕು. ಯಾವುದೇ ಹುದ್ದೆಗಳ ಕಡಿತ ಪ್ರಸ್ತಾವನೆಗಳನ್ನು ಕೈಬಿಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.
ಬೇಡಿಕೆಗಳನ್ನು ಈಡೇರಿಸಬೇಕೆಂದು ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಸಚಿವಾಲಯ ಬಂದ್ ಕರೆ ನೀಡಲಾಗಿದೆ. ಆ ಮೂಲಕ ಹೋರಾಟಕ್ಕೆ ಇಳಿದಿದ್ದೇವೆ ಎಂದು ಪಿ. ಗುರುಸ್ವಾಮಿ ಹೇಳಿದ್ದಾರೆ.
ನೌಕರರ ಸಂಘದ ಈ ಪ್ರತಿಭಟನೆಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಸಚಿವಾಲಯದ ಅಧಿಕಾರಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು. ಕೆಲಸ ನಿರ್ವಹಿಸುವವರಿಗೆ ಅಡ್ಡಿ ಪಡಿಸಬಾರದು ಎಂದು ಹೇಳಿದ್ದಾರೆ.