EMERGENCY NEWS ಜಗತ್ತಿನ ಕೊರೋನಾ ಹಬ್ ಆಗುತ್ತಿದೆ ಭಾರತ.. ಇಲ್ಲಿದೆ ಅಂಕಿ ಅಂಶ

ಭಾರತದಲ್ಲಿ ಕೊರೋನಾ ವೈರಸ್ ಮಹಾಮಾರಿ ತನ್ನ ಉಗ್ರ ರೂಪವನ್ನು ತೋರಿಸುತ್ತಿದೆ. ಕಳೆದ ಮೂರು ದಿನಗಳಿಂದ ಪ್ರತಿ ದಿನ ಆರು ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟೀವ್ ಪ್ರಕರಣಗಳು ನಮೂದಾಗುತ್ತಿವೆ.

ಕಳೆದ 24 ಗಂಟೆಗಳಲ್ಲಿ ಅತ್ಯಧಿಕವಾಗಿ 6767 ಪಾಸಿಟೀವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ವೈರಸ್ ಕಂಡುಬಂದ ಬಳಿಕ ಒಂದೇ ದಿನದಲ್ಲಿ ಇಷ್ಟೊಂದು ಪ್ರಕರಣಗಳು ವರದಿಯಾಗುತ್ತಿರುವುದು ಇದೇ ಮೊದಲು. ಸದ್ಯ ದೇಶದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 1,31,868 ಆಗಿದೆ.

ಕಳೆದ 24 ಗಂಟೆಗಳಲ್ಲಿ 147 ಮಂದಿ ಕರೋನಾಗೆ ಬಲಿಯಾಗಿದ್ದು, ಮಾರಕ ಸೋಂಕಿಗೆ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 3,867ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ 54,441 ಇದ್ದು, 73,560 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆತಂಕದ ವಿಚಾರ ಎಂದರೆ, ದೇಶದಲ್ಲಿ ದಿನೇ ದಿನೇ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗಿದೆ. ಕಳೆದ ಒಂದು ವಾರದಲ್ಲಿ ಒಂದು ದಿನ ಬಿಟ್ಟು ಉಳಿದೆಲ್ಲಾ ದಿನಗಳು 5 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರೊಂದಿಗೆ ಒಂದೇ ದಿನ ಹೆಚ್ಚು ಕೇಸುಗಳು ನಮೂದಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಮೇ ತಿಂಗಳ ಆರಂಭದಲ್ಲಿ ಒಂದು ದಿನದಲ್ಲಿ ಬೆಳಕಿಗೆ ಬರುವ ಪ್ರಕರಣಗಳ ಸಂಖ್ಯೆ 2400 ದಾಟಿತ್ತು. ಒಂದು ವಾರದ ಬಳಿಕ ಈ ಸಂಖ್ಯೆ 3 ಸಾವಿರ ದಾಟಿತ್ತು. ಕಳೆದ ಒಂದು ವಾರದಿಂದ 5-6 ಸಾವಿರದ ಆಸುಪಾಸಿನಲ್ಲಿ ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ 24 ಗಂಟೆಗಳಲ್ಲಿ ಬೆಳಕಿಗೆ ಬಂದ ಪ್ರಕರಣ ಸಂಖ್ಯೆ 6767.

ಒಂದು ದಿನದಲ್ಲಿ ನಮೂದಾಗುತ್ತಿರುವ ಅತೀ ಹೆಚ್ಚು ಕೊರೋನಾ ಪ್ರಕರಣಗಳ ದೇಶಗಳ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಅಮೆರಿಕಾದಲ್ಲಿ ಒಂದು ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ವ್ಯಾಪಿಸುತ್ತಿದೆ. ನಿನ್ನೆ ಒಂದೇ ದಿನ ಅಮೆರಿಕಾದಲ್ಲಿ 21,929 ಪ್ರಕರಣಗಳು ಬೆಳಕಿಗೆ ಬಂದಿವೆ. 1,036 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ.

ಬ್ರೆಜಿಲ್‍ನಲ್ಲಿ ಕಳೆದ ಒಂದು ವಾರದಿಂದ ದಿನವೊಂದಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಬಾಧಿತರಾಗುತ್ತಿದ್ದಾರೆ. ನಿನ್ನೆಯ ದಿನ ಈ ಪ್ರಮಾಣ ಸ್ವಲ್ಪ ಕಮ್ಮಿ ಇತ್ತು. 16,508 ಮಂದಿಗೆ ಕೊರೋನಾ ಸೋಂಕು ಬಂದಿದೆ. 965 ಮಂದಿ ಸಾವನ್ನಪ್ಪಿದ್ದಾರೆ.

ರಷ್ಯಾದಲ್ಲಿ ದಿನವೊಂದಕ್ಕೆ 8-10 ಸಾವಿರ ಪ್ರಕರಣಗಳು ನಮೂದಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 9,434 ಮಂದಿ ಬಾಧಿತರಾಗಿದ್ದಾರೆ. 139 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ.

ರಷ್ಯಾ ನಂತರದ ಸ್ಥಾನ ಭಾರತ ದೇಶದ್ದು.. ಇದು ಆತಂಕಕ್ಕೆ ಕಾರಣವಾಗಿದೆ. ಬಳಿಕ ಪೆರು ಸೇರಿದಂತೆ ಇತರೆ ದೇಶಗಳು ಬರುತ್ತವೆ.

ಕಳೆದ ತಿಂಗಳು ಅತೀ ಹೆಚ್ಚು ಪ್ರಕರಣಗಳು ನಮೂದಾಗಿದ್ದ ಫ್ರಾನ್ಸ್, ಇಟಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

LEAVE A REPLY

Please enter your comment!
Please enter your name here