ಮಹಾರಾಷ್ಟçದಲ್ಲಿ ಹೊಸದಾಗಿ ರಚನೆ ಆಗಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸರ್ಕಾರ ಬಹುಮತ ಗೆದ್ದಿದೆ.
ವಿಧಾನಸಭೆಯಲ್ಲಿ ಇವತ್ತು ನಡೆದ ವಿಶ್ವಾಸಮತಯಾಚನೆ ವೇಳೆ ಬಿಜೆಪಿ-ಶಿವಸೇನೆ ಬಂಡಾಯ ಬಣದ ಸರ್ಕಾರವನ್ನು 164 ಶಾಸಕರು ಬೆಂಬಲಿಸಿದರೆ, ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಮೈತ್ರಿಕೂಟದ ಪರವಾಗಿ 99 ಶಾಸಕರು ಮತ ಹಾಕಿದ್ದಾರೆ.
ಮೂಲ ಶಿವಸೇನೆ ಶಾಸಕರು ಸಭಾತ್ಯಾಗ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಬಣದಲ್ಲಿದ್ದ ಶಾಸಕ ಸಂತೋಷ್ ಬಂಗಾರ್ ಅವರು ಶಿಂಧೆ ಬಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಶಿಂಧೆ ಬಣದ ಶಿವಸೇನೆಯ ಶಾಸಕರ ಬಲ 40ಕ್ಕೆ ಏರಿದೆ.
ಇಬ್ಬರು ಕಾಂಗ್ರೆಸ್ ಶಾಸಕರಾದ ಮಾಜಿ ಸಿಎಂ ಅಶೋಕ್ ಚವ್ಹಾಣ್ ಮತ್ತು ವಡ್ಡೇಟಿವಾರ್ ಅವರಿಗೆ ಮತದಾನಕ್ಕೆ ಸ್ಪೀಕರ್ ರಾಹುಲ್ ನರ್ವೆಕರ್ ಅವಕಾಶ ನೀಡಲಿಲ್ಲ.
ಶಿವಸೇನೆ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಕೂಡಾ ಮತದಾನಕ್ಕೆ ವಿಳಂಬವಾಗಿ ಬಂದರು.
ಇನ್ನು ಶಿವಸೇನೆ ಮುಖ್ಯ ಸಚೇತಕರಾಗಿದ್ದ ಸುನಿಲ್ ಪ್ರಭು ಅವರ ಬದಲು ಶಿಂಧೆ ಬಣದ ಶಾಸಕ ಭರತ್ ಗೋಗಾವಾಲೆ ಅವರನ್ನು ಸ್ಪೀಕರ್ ರಾಹುಲ್ ನರ್ವೆಕರ್ ಅವರು ಶಿವಸೇನೆಯ ಮುಖ್ಯ ಸಚೇತಕ ಎಂದು ಮಾನ್ಯತೆ ನೀಡಿದ್ದಾರೆ. ಸ್ಪೀಕರ್ ಈ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಜುಲೈ 11ರಂದು ನಡೆಯಲಿದೆ.