ದಸರಾ ರಜೆ : KSRTC ಯಿಂದ 2,000 ಹೆಚ್ಚುವರಿ ಬಸ್ ಕಾರ್ಯಾಚರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಮೈಸೂರು ದಸರಾ ಹಬ್ಬ ಹಾಗೂ ದಸರಾ ರಜೆ (Dussera Holiday) ಪ್ರಯುಕ್ತ ಸೆಪ್ಟೆಂಬರ್‌ 30ರಿಂದ ಅಕ್ಟೋಬರ್ 3ರವರೆಗೆ ಹೆಚ್ಚುವರಿಯಾಗಿ 2000 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನಿಂದ ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಬಸ್‌ಗಳು ಸಂಚರಿಸಲಿವೆ.

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್‌ ಮತ್ತು ಶಾಂತಿನಗರದಲ್ಲಿನ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ ಎಂದು ಹೇಳಲಾಗಿದ್ದು, ಅಕ್ಟೋಬರ್‌ 7ರಿಂದ 9ರ ವರೆಗೆ ರಾಜ್ಯ ಮತ್ತು ಅಂತಾರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರು http://www.ksrtc.karnataka.gov.in ಗೆ ಲಾಗಿನ್ ಆಗಿ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಬುಕ್ ಮಾಡಬಹುದು ಮತ್ತು ಮೊಬೈಲ್ ಮೂಲಕ ಎಂ-ಬುಕಿಂಗ್ ಮಾಡಬಹುದು.

ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಂದೇ ಬುಕಿಂಗ್‌ನಲ್ಲಿ ಟಿಕೆಟ್ ಕಾಯ್ದಿರಿಸಿದರೆ, ದರದಲ್ಲಿ 5% ರಿಯಾಯಿತಿಯನ್ನು ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಏಕಕಾಲದಲ್ಲಿ ಬುಕ್ ಮಾಡಿದರೆ ರಿಟರ್ನ್ ಜರ್ನಿ ಟಿಕೆಟ್‌ನಲ್ಲಿ 10% ರಿಯಾಯಿತಿಯನ್ನು ನೀಡಲಾಗುತ್ತದೆ. ವಿಶೇಷ ಬಸ್‌ಗಳಿಗೆ ಮುಂಗಡವಾಗಿ ಗಣಕೀಕೃತ ಕಾಯ್ದಿರಿಸುವಿಕೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ : KSRTC ಬಸ್​​ನಲ್ಲಿ ಯುವತಿಗೆ ಮುತ್ತು ಕೊಟ್ಟ ಯುವಕ