ಎರಡು ಡಬಲ್ ಡೆಕ್ಕರ್ ಬಸ್ಗಳ ನಡುವಿನ ಡಿಕ್ಕಿಯಿಂದ ಸ್ಥಳದಲ್ಲಿಯೇ 8 ಜನ ಮೃತಪಟ್ಟು, 16 ಜನ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್ ನಿಂತಿದ್ದ ಮತ್ತೊಂದು ಡಬಲ್ ಡೆಕ್ಕರ್ ಬಸ್ಗೆ ಡಿಕ್ಕಿ ಹೊಡೆದಿದೆ. ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸೀತಾಮರ್ಹಿಯಿಂದ ಬರುತ್ತಿದ್ದ ಬಸ್ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ನಿಂತಿದ್ದ ಬಸ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಬಾರಾಬಂಕಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಮನೋಜ್ ಪಾಂಡೆ ಹೇಳಿದ್ದಾರೆ.
ಮೃತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಲಖನೌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.