BBMPಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾಮಗಾರಿಗಳ ತನಿಖೆಗೆ DCM ಡಿಕೆಶಿ ಸೂಚನೆ

ಯಾವ, ಯಾವ ಕಾಮಗಾರಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ ಮತ್ತು ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ ಹಾಗೂ ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ ಎಂಬ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸಲಹೆ ಸೂಚನೆಗಳನ್ನು ನೀಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾಮಗಾರಿಗಳ ಬಗ್ಗೆ ಮಾಹಿತಿ ಸಲ್ಲಿಸಲು ಸೂಚನೆ:
ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಿಧಾನಸಭೆ ಕ್ಷೇತ್ರವಾರು ಆಗಿರುವ ಕೆಲಸ, ಯಾವ ಯೋಜನೆಯಡಿ ಆ ಕೆಲಸ ಆಗಿದೆ..? ಅದಕ್ಕೆ ಆಗಿರುವ ಖರ್ಚು ವಿವರ, ಕೆಲಸ ಆಗಿರುವ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು ಎಂದು ಡಿಕೆಶಿವಕುಮಾರ್​ ಸೂಚಿಸಿದ್ದಾರೆ.
ಕಾಮಗಾರಿಗಳಿಗೆ ತಡೆ:
ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ ಮತ್ತು ಕಾಮಗಾರಿಗಳನ್ನು ಯಥಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು ಎಂದೂ ಉಪ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ. ನಾನು ಹಳ್ಳಿಯಿಂದ ಬಂದಿದ್ದರೂ ನನಗೆ ಈ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಮಾಹಿತಿ ಪಡೆಯುವ ಶಕ್ತಿಯೂ ನನಗಿದೆ. ಕೆಲಸ ಆಗಿರುವ ಜಾಗಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡೋಣ. ಕಣ್ಣಲ್ಲಿ ಕಂಡಿದ್ದು ಮಾತ್ರವೇ ನಂಬಿಕೆಗೆ ಅರ್ಹ. ಹೀಗಾಗಿ ಕಣ್ಣಲ್ಲಿ ನೋಡಿ ನಂಬೋಣ ಎಂದು ಡಿಸಿಎಂ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಇಂಜಿನಿಯರ್​ ಯಾಕೆ ಬೇಕು..?
ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ ಯಾಕೆ ಬೇಕು..? ನಿಮ್ಮ ಕೆಲಸವನ್ನು ಬೇರೆ ಯಾರೋ ಮಾಡುವುದಾದರೆ ನೀವು ಇರುವುದಾದರೂ ಏಕೆ..? ಎಂದು ಸಭೆಯಲ್ಲಿ ಪ್ರಶ್ನಿಸಿದ್ದಾರೆ.
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ಹಾಗೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು. ಒಣ ಮತ್ತು ಹಸಿಕಸ ವೈಜ್ಞಾನಿಕ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿ ಡಿ ಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು. ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಯೋ, ಫೋಟೋ ಮಾಡಿಡಿ. ನಿಜವಾಗಿಯೂ ಜನರ ಉಪಯೋಗಕ್ಕೆ ಆ ಯೋಜನೆ ಆಗುತ್ತಿದೆಯೋ ಅಥವಾ ಇನ್ಯಾರಾದರೂ ಪ್ರಭಾವಿಗಳ ಅನುಕೂಲಕ್ಕೆ ಆ ಯೋಜನೆ ಆಗುತ್ತಿದೆಯೋ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗಲಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿವಕುಮಾರ್​ ಸೂಚಿಸಿದ್ದಾರೆ.