BIG BREAKING: ಸುಪ್ರೀಂಕೋರ್ಟ್​​ಗೆ ಮೋದಿ ಸರ್ಕಾರದ ಸೆಡ್ಡು – ಐತಿಹಾಸಿಕ ತೀರ್ಪಿಗೆ ತದ್ವಿರುದ್ಧ ಸುಗ್ರೀವಾಜ್ಞೆ

ದೆಹಲಿಯ ಉಪ ರಾಜ್ಯಪಾಲರು ಸಂಪುಟದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಪ್ರೀಂಕೋರ್ಟ್​ ತೀರ್ಪಿಗೆ ಸೆಡ್ಡು ಹೊಡೆದಿದೆ.

ದೆಹಲಿ ಸರ್ಕಾರದ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.

ಹೊಸ ಸುಗ್ರೀವಾಜ್ಞೆಯಲ್ಲಿ ಏನಿದೆ..?

ದೆಹಲಿ ಸರ್ಕಾರದಲ್ಲಿ ಸೇವೆ ಸಲ್ಲಿಸುವ ಗ್ರೂಪ್​ ಎ ದರ್ಜೆಯ ಅಧಿಕಾರಿಗಳು ಮತ್ತು ಡಾನಿಕ್ಸ್​ ಅಧಿಕಾರಿಗಳ ಸ್ಥಳ ನಿಯೋಜನೆ ಮತ್ತು ವರ್ಗಾವಣೆ ಸಂಬಂಧ ನಿರ್ಧರಿಸಲು ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಮಾಡಲಾಗಿದೆ.

ಈ ಪ್ರಾಧಿಕಾರದಲ್ಲಿ ದೆಹಲಿ ಮುಖ್ಯಮಂತ್ರಿ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೆಹಲಿ ಸರ್ಕಾರದ ಗೃಹ ಕಾರ್ಯದರ್ಶಿ ಇರಲಿದ್ದಾರೆ.

ಈ ಮೂವರು ಸದಸ್ಯರ ಪ್ರಾಧಿಕಾರ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಸಂಬಂಧ ದೆಹಲಿಯ ಉಪ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಿದೆ.

ಒಂದು ವೇಳೆ ಅಧಿಕಾರಿಗಳ ನಿಯೋಜನೆ ಅಥವಾ ವರ್ಗಾವಣೆ ಸಂಬಂಧ ಪ್ರಾಧಿಕಾರದ ಸದಸ್ಯರ ಮಧ್ಯೆ ಒಮ್ಮತ ಮೂಡದೇ ಇದ್ದಲ್ಲಿ ಆಗ ದೆಹಲಿ ಉಪ ರಾಜ್ಯಪಾಲರ ನಿರ್ಧಾರವೇ ಅಂತಿಮ ನಿರ್ಧಾರವಾಗಲಿದೆ.

ಸುಪ್ರೀಂಕೋರ್ಟ್​ ತೀರ್ಪಿಗೆ ಸೆಡ್ಡು:

ಈ ಸುಗ್ರೀವಾಜ್ಞೆಯೊಂದಿಗೆ ಪ್ರಧಾನಿ ಮೋದಿ ಸರ್ಕಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ನೇತೃತ್ವದ ಸುಪ್ರೀಂಕೋರ್ಟ್​ನ ಸಂವಿಧಾನಿಕ ಪೀಠ ನೀಡಿದ್ದ ಐತಿಹಾಸಿಕ ತೀರ್ಪಿಗೆ ಸೆಡ್ಡು ಹೊಡೆದಿದೆ.

ದೆಹಲಿಯ ಉಪ ರಾಜ್ಯಪಾಲರು ದೆಹಲಿಯ ಚುನಾಯಿತ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕು, ಸಂಪುಟ ಸಭೆಯ ತೀರ್ಮಾನವನ್ನು ಪಾಲಿಸಬೇಕಾಗುತ್ತದೆ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಸೇವಾ ವಿಷಯಗಳಲ್ಲಿ ದೆಹಲಿ ಸರ್ಕಾರದ ತೀರ್ಮಾನವೇ ಅಂತಿಮ ಎಂದಿತ್ತು.

ಆದರೆ ಈಗ ಮತ್ತೆ ಸುಗ್ರೀವಾಜ್ಞೆ ಮೂಲಕ ಆಡಳಿತಾತ್ಮಕ ನಿರ್ಧಾರವನ್ನು ದೆಹಲಿ ಸರ್ಕಾರದ ಕೈಯಿಂದ ಕಸಿದು ಮತ್ತೆ ಉಪ ರಾಜ್ಯಪಾಲರ ಕೈಗೆ ಮೋದಿ ಸರ್ಕಾರ ನೀಡಿದೆ.