ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೋಮವಾರ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರಿಗೆ ವಾರಂಟ್ ಜಾರಿ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮಾಜಿ ಸಂಸದ ಕಿರಿತ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾದ ಹಿನ್ನಲೆಯಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ವಿರುದ್ಧ ಮುಂಬೈನ ನ್ಯಾಯಾಲಯ ಸೋಮವಾರ ಜಾಮೀನು ಪಡೆಯಬಹುದಾದ ವಾರಂಟ್ ಹೊರಡಿಸಿದೆ. ಅಲ್ಲದೆ ನ್ಯಾಯಾಲಯವು ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ.
ಸೆವ್ರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ತಿಂಗಳು ರಾವತ್ ವಿರುದ್ಧ ಪ್ರಕ್ರಿಯೆ (ಸಮನ್ಸ್) ಜಾರಿಗೊಳಿಸಿ, ಜುಲೈ 4 ರಂದು ತನ್ನ ಮುಂದೆ ಹಾಜರಾಗುವಂತೆ ಹೇಳಿತ್ತು. ಆದರೆ, ಸೋಮವಾರ ರಾವತ್ ಅಥವಾ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಇಂದು ವಾರಂಟ್ ಜಾರಿ ಮಾಡಲಾಗಿದೆ. ಸಂಜಯ್ ರಾವತ್ ಅವರಿಗೆ ವಾರಂಟ್ ಹೊರಡಿಸಲು ಅರ್ಜಿ ಸಲ್ಲಿಸಿದ್ದವು. ಅದನ್ನು ನ್ಯಾಯಾಲಯವು ಅನುಮತಿಸಿದೆ ಎಂದು ಮೇಧಾ ಸೋಮಯ್ಯ ಅವರ ವಕೀಲ ವಿವೇಕಾನಂದ ಗುಪ್ತಾ ಹೇಳಿದ್ದಾರೆ.
ಮೇಧಾ ಸೋಮಯ್ಯ ಅವರು ವಕೀಲರಾದ ಗುಪ್ತಾ ಮತ್ತು ಲಕ್ಷ್ಮಣ್ ಕನಾಲ್ ಅವರ ಮೂಲಕ ಸಲ್ಲಿಸಿದ ದೂರಿನಲ್ಲಿ, ರಾವುತ್ ಅವರು ತಮ್ಮ ಮತ್ತು ತಮ್ಮ ಪತಿ ವಿರುದ್ಧ ಆಧಾರರಹಿತ ಮತ್ತು ಸಂಪೂರ್ಣ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ, ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ ಅಡಿಯಲ್ಲಿ ಕೆಲವು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ 100 ಕೋಟಿ ರೂಪಾಯಿಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.