ನಟ ದರ್ಶನ್​ರಿಂದ ಕೊಲೆ ಬೆದರಿಕೆ : ನಿರ್ಮಾಪಕನಿಂದ ದೂರು ದಾಖಲು

ನಟ ದರ್ಶನ್ ತಮಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ಮಾಡಿ ಪ್ರಾರಂಭಿಸಿದ್ದರು. ಸಿನಿಮಾಕ್ಕೆ ಧೃವನ್ (ಸೂರಜ್) ನಾಯಕ ನಟರಾಗಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಾ ಸಾಗಿತ್ತು.

ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದ್ದಕ್ಕೆ ಚಿತ್ರೀಕರಣ ತಡವಾಗಿದೆ ಎಂದು ನಿರ್ಮಾಪಕ ಭರತ್, ನಟ ಧ್ರುವನ್ ಬಳಿ ಹೇಳಿದ್ದರು. ಈ ಬಗ್ಗೆ ಧ್ರುವನ್, ದರ್ಶನ್ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದಾರೆ ಆ ಸಮಯದಲ್ಲಿ ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್, ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಸಿನಿಮಾದ ನಿರ್ದೇಶಕ ಆಂಥೊನಿ ಸಿನಿಮಾದ ಕ್ಯಾಮೆರಾಮನ್ ಅವರುಗಳು ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದ್ದು, ”ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೆ ಕಾಣಿಸದಂತೆ ಮಾಡಿಬಿಡ್ತೀನಿ ಹುಷಾರಾಗಿರು” ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆ ಧ್ವನಿ ದರ್ಶನ್ ಅವರ ಧ್ವನಿ ಹೋಲುತ್ತಿದೆ.

LEAVE A REPLY

Please enter your comment!
Please enter your name here