ಮೂಡುಬಿದಿರೆ : ಇಂದಿನಿಂದ ರಾಜ್ಯದ್ಯಾಂತ ಲಾಕ್ ಡೌನ್ ನಿಯಮ ಜಾರಿಯಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 9ರ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಆದರೆ ಹದಿನಾಲ್ಕು ದಿನಗಳ ಲಾಕ್ ಡೌನ್ ನ ಮೊದಲ ದಿನವಾದ ಸೋಮವಾರವೇ ಮೂಡುಬಿದಿರೆಯಲ್ಲಿ ಸಾರ್ವಜನಿಕರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು, ಮುಂಜಾನೆ 6 ರಿಂದ 9ರ ವರೆಗೆ ತೆರೆದಿದ್ದ ಅವಶ್ಯಕ ವಸ್ತುಗಳ ಅಂಗಡಿಗಳಲ್ಲಿ ವಿಪರೀತ ಜನಸಂದಣಿ ಕಂಡುಬಂದಿದೆ.
ತರಕಾರಿ, ದಿನಸಿ, ಹಣ್ಣು, ಹಾಲು, ಪತ್ರಿಕೆ, ಬೇಕರಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕಿಕ್ಕಿರಿದ್ದು ಜನ ಸೇರಿದ್ದು, ದಿನವಿಡೀ ತೆರೆದಿರುವ ಮೆಡಿಕಲ್ ಸ್ಟೋರ್ ಗಳಲ್ಲಿಯೂ ಜನ ಅಧಿಕವಾಗಿದ್ದಾರೆ.
ಅಲ್ಲದೇ ರಸ್ತೆ ಬದಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಲಾಗಿದ್ದು, ವಾಹನಗಳ ಚಾಲಕರಿಗೆ ಪೊಲೀಸ್ ಗಸ್ತು ಪಡೆಯವರ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಕಡೆ ಜನ ಮಾಸ್ಕ್ ಹಾಕಿಕೊಂಡಿದ್ದರಾದರೂ ಕೂಡ ವೈಯಕ್ತಿಕವಾಗಿ ಅಂತರ ಕಾಪಾಡಿಕೊಳ್ಳಲಾಗದ ಸ್ಥಿತಿ ಕಂಡು ಬಂದಿದೆ.