ಡಾಲಿ ಧನಂಜಯ್​ ಹುಟ್ಟುಹಬ್ಬದಂದು ಅಪರೂಪದ ಘೋಷಣೆ – ಹೊಸಬರಿಗೆ ಸಿಹಿ ಸುದ್ದಿ

ನಟ ರಾಕ್ಷಸ ಡಾಲಿ ಧನಂಜಯ್​ ಅವರ ಹುಟ್ಟುಹಬ್ಬದ ಹೊತ್ತಲ್ಲಿ ಡಾಲಿ ಪಿಕ್ಚರ್ಸ್​​ ಮಹತ್ವದ ಘೋಷಣೆ ಮಾಡಿದೆ. ಕನ್ನಡ ಸಿನಿಮಾ ಲೋಕದಲ್ಲಿ ಹೊಸಬರನ್ನು, ಹೊಸ ಮುಖಗಳನ್ನು ಪರಿಚಯಿಸಲು ಡಾಲಿ ಅವರ ಈ ಕಾರ್ಯ ಅತ್ಯಂತ ಮಹತ್ವದ್ದು.

ಡಾಲಿ ಪಿಕ್ಚರ್ಸ್​ ವರ್ಷದಲ್ಲಿ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡಲಿದ್ದು, ಆ ಎರಡು ಸಿನಿಮಾಗಳ ಪೈಕಿ ಒಂದರಲ್ಲಿ ಹೊಸಬರಿಗಷ್ಟೇ ಅವಕಾಶ ನೀಡುವುದಾಗಿ ಡಾಲಿ ಪಿಕ್ಚರ್ಸ್​ ಘೋಷಿಸಿದೆ.

ಧನಂಜಯ್​ ಅವರು ಸಿನಿಮಾ ಹಿನ್ನೆಲೆ ಇಲ್ಲದೇ ಒಂದು ಹಿಡಿಯಷ್ಟು ಆಸೆ, ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟವರು. ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲು ಬಹಳಷ್ಟು ಕಸರತ್ತು ಪಡೆಯಬೇಕಾದ ಕಾಲವಿತ್ತು. ಅನೇಕ ತಡೆಗೋಡೆಗಳ ಅಡಚಣೆಗಳನ್ನು ದಾಟಿ ಸಾಗಿದ ಅವರ ಪ್ರಯಾಣ ಕರುನಾಡಿಗೆ ತಿಳಿಯದ ಕಥೆ ಏನಲ್ಲ. ಅವರ ಅಷ್ಟೂ ಪ್ರಯತ್ನಗಳ ಸಾರ್ಥಕತೆ ದೊರಕಿದ್ದು ಡಾಲಿ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಮತ್ತು ನಟ ರಾಕ್ಷಸ ಎಂಬ ಬಿರುದಿನಲ್ಲಿ.

ಹೀಗಾಗಿ ಹೊಸಬರ ಆರಂಭದಲ್ಲಿ ಕಲ್ಲು-ಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದು ಎಂದು ಸ್ವತಃ ಆ ದಾರಿಯಲ್ಲಿ ನಡೆದು ಬಂದಿರುವ ಡಾಲಿ ಧನಂಜಯ್​ ಅವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ.

ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್​ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ.

ನಮ್ಮನ್ನು ಇಷ್ಟು ವರ್ಷ ಕೈಹಿಡಿದು ನಡೆಸಿದ ಹಾಗೆ ಇನ್ನು ಮುಂದೆ ಕೂಡಾ ನಮ್ಮ ಈ ಹೊಸ ಪ್ರಯತ್ನಕ್ಕೆ ಪ್ರೀತಿ-ವಿಶ್ವಾಸ ಹಾರೈಕೆಗಳಿರಲಿ ಎಂದು ಬಯಸುತ್ತೇವೆ.

ಇಂತಿ ನಿಮ್ಮ ನೆಚ್ಚಿನ ಡಾಲಿ ಪಿಕ್ಚರ್ಸ್​

ಎಂದು ಡಾಲಿ ಅವರ ಡಾಲಿ ಪಿಕ್ಚರ್ಸ್​ ಘೋಷಿಸಿದೆ.

LEAVE A REPLY

Please enter your comment!
Please enter your name here