ದನ ಅಥವಾ ಎತ್ತು ಸಾಗಾಟ ಅಪರಾಧವಲ್ಲ – ಹೈಕೋರ್ಟ್​

ಜಾನುವಾರಗಳ ಸಾಗಾಟ ಅಥವಾ ಜಾನುವಾರುಗಳನ್ನು ಹೊಂದಿದ್ದಾರೆ ಎನ್ನುವುದು ಅಪರಾಧವಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ತೀರ್ಪು ನೀಡಿದೆ.
ಉತ್ತರಪ್ರದೇಶದ ವ್ಯಕ್ತಿಯೊಬ್ಬರ ವಾಹನದಿಂದ ಆರು ದನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ದನಗಳಿಗೆ ಯಾವ ಗಾಯವೂ ಆಗಿರಲಿಲ್ಲ. ಆ ವ್ಯಕ್ತಿಯ ವಿರುದ್ಧ ಉತ್ತರಪ್ರದೇಶ ಗೋ ಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮೂರು ತಿಂಗಳು ಜೈಲಿನಲ್ಲಿಡಲಾಗಿತ್ತು. ಆ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.
ಜೀವಂತವಿರುವ ದನ ಅಥವಾ ಎತ್ತನ್ನು ಹೊಂದಿದ್ದಾರೆ ಎನ್ನುವುದು ಉತ್ತರಪ್ರದೇಶ ಗೋ ಹತ್ಯೆ ನಿಷೇಧ ಕಾಯ್ದೆಯಡಿ ಅಪರಾಧವಲ್ಲ. ಉತ್ತರಪ್ರದೇಶದೊಳಗೆ ಒಂದು ಕಡೆಯಿಂದ ಇನ್ನೊಂದು ಸ್ಥಳಕ್ಕೆ ಜಾನುವಾರು ಸಾಗಾಟ ಕಾಯ್ದೆಯ ಪ್ರಕಾರ ಅಪರಾಧವಲ್ಲ
ಎಂದು ನ್ಯಾಯಮೂರ್ತಿ ವಿಕ್ರಂ ಡಿ ಚೌಹೌಣ್​ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ದನ ಅಥವಾ ಎತ್ತನ್ನು ಹತ್ಯೆ ಮಾಡಿದ್ದಾನೆ ಎನ್ನುವುದಕ್ಕೆ ಸರ್ಕಾರ ಸಾಕ್ಷ್ಯಗಳನ್ನು ನೀಡಲು ವಿಫಲವಾಗಿದೆ. ಆರೋಪಿ ಕ್ರಿಮಿನಲ್​ ಹಿನ್ನೆಲೆಯವನು ಎನ್ನುವುದಕ್ಕೂ ಸಾಕ್ಷ್ಯ ಒದಗಿಸಿಲ್ಲ
ಎಂದು ಹೈಕೋರ್ಟ್​ ಆದೇಶದಲ್ಲಿ ಹೇಳಿದೆ.