BIG BREAKING: ಕೋವಿಡ್​ ಲಸಿಕೆ ಪಡೆದವರ ಖಾಸಗಿ ಮಾಹಿತಿಗಳೆಲ್ಲವೂ ಬಹಿರಂಗ – ಅಪಚಿತರ ಕೈಗೆ ಖಾಸಗಿ ಮಾಹಿತಿ

ಕೋವಿಡ್​ ಲಸಿಕೆ ಪಡೆಯುವ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಲ್ಲಿಕೆ ಮಾಡಿದ್ದ ದತ್ತಾಂಶಗಳೆಲ್ಲವೂ ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ (Telegram App) ಸೋರಿಕೆಯಾಗಿವೆ. 

ಈ ಬಗ್ಗೆ ಮೊದಲು ತನಿಖಾ ವರದಿ ಪ್ರಕಟಿಸಿದ್ದು ಮಲಯಾಳಂ THE FOURTHNEWS. ಆ ಬಳಿಕ ಈ ಸುದ್ದಿಯನ್ನು ದಿ ನ್ಯೂಸ್​ ಮ್ಯೂನಿಟ್​ ಕೂಡಾ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಲಸಿಕೆ ಪಡೆಯುವ ವೇಳೆ ಕಡ್ಡಾಯವಾಗಿ ಸಲ್ಲಿಕೆ ಮಾಡಲಾಗಿದ್ದ ಲಸಿಕೆ ಪಡೆದವರ ದೂರವಾಣಿ ಸಂಖ್ಯೆ, ಆಧಾರ್​ ಕಾರ್ಡ್​ ಸಂಖ್ಯೆ, ಪಾಸ್​ಪೋರ್ಟ್​ ಮಾಹಿತಿ, ಪ್ಯಾನ್​ ಮಾಹಿತಿ ಅಥವಾ  ಸಲ್ಲಿಕೆ ಮಾಡಲಾಗಿದ್ದ ಗುರುತಿನ ಚೀಟಿ ಮಾಹಿತಿ ಮತ್ತು ಜನ್ಮ ದಿನಾಂಕ ಒಳಗೊಂಡಂತೆ ಹಲವು ಮಾಹಿತಿಗಳು ಟೆಲಿಗ್ರಾಂನಲ್ಲಿ ಸೋರಿಕೆ ಆಗಿವೆ.

ಟೆಲಿಗ್ರಾಂ ಅ್ಯಪ್​ನಲ್ಲಿ ವ್ಯಕ್ತಿಯ ಮೊಬೈಲ್​ ನಂಬರ್​ನ್ನು  ನಮೂದು ಮಾಡಿದರೆ ಆ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಯಾರೂ ಬೇಕಾದರೂ ಪಡೆದುಕೊಳ್ಳಬಹುದು.

ಯಾವ ದಿನ ಯಾರು ಎಲ್ಲಿ ಲಸಿಕೆ ಪಡೆದರೆ ಮಾಹಿತಿಯನ್ನೂ ಟೆಲಿಗ್ರಾಂನಲ್ಲಿ ಯಾರೂ ಬೇಕಾದರೂ ಪಡೆದುಕೊಳ್ಳಬಹುದು.

ಕೋವಿಡ್​ ಲಸಿಕೆ ಪಡೆಯುವ ವೇಳೆ ಕೇಂದ್ರ ಸರ್ಕಾರವೇ ಅಭಿವೃದ್ಧಿಪಡಿಸಿರುವ ಕೋವಿನ್​ ವೆಬ್​ಸೈಟ್​​ಗೆ ಲಸಿಕೆ ಪಡೆಯದವರ ಖಾಸಗಿ ಮಾಹಿತಿಗಳೆಲ್ಲವನ್ನೂ ದಾಖಲು ಮಾಡಲಾಗಿತ್ತು.

ಅಪರಿಚಿತರ ಕೈಗೆ ಖಾಸಗಿ ಮಾಹಿತಿ:

ಟೆಲಿಗ್ರಾಂ Appನಲ್ಲಿ ಕೋವಿಡ್​ ಲಸಿಕೆ ಪಡೆದವರ ಮಾಹಿತಿ ಭಾರತೀಯರ ಮಾಹಿತಿ ಸೋರಿಕೆ ಆಗಿರುವುದರಿಂದ ಯಾರೂ ಬೇಕಾದ ಯಾರ ಖಾಸಗಿ ಮಾಹಿತಿ, ಖಾಸಗಿ ದಾಖಲೆಗಳನ್ನು ತಿಳಿದುಕೊಳ್ಳಬಹುದು. ಇದರಿಂದ ಆಧಾರ್​, ದೂರವಾಣಿ ಸಂಖ್ಯೆ, ಪ್ಯಾನ್​, ವೋಟರ್​ ಐಡಿ ಸೇರಿದಂತೆ ದಾಖಲೆಗಳನ್ನು ಅಪರಿಚಿತರ ಕೈಗೆ ಕೊಡದೇ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕೆಂಬ ಉದ್ದೇಶಕ್ಕೆ ದೊಡ್ಡ ಹೊಡೆತ ನೀಡಿದೆ.

ಮುಖ್ಯಮಂತ್ರಿ, ಸಚಿವರ ಮಾಹಿತಿಯೂ ಸೋರಿಕೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಧಾರ್​ ಕಾರ್ಡ್​ ಮಾಹಿತಿ, ಅವರ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್​ ಅವರ ಆಧಾರ್​ ಕಾರ್ಡ್​ ಮಾಹಿತಿಯೂ ಸೋರಿಕೆ ಆಗಿದೆ. ಈ ಮಾಹಿತಿಯನ್ನೇ ಲಸಿಕೆ ಪಡೆಯುವ ವೇಳೆ ಕೊಟ್ಟಿದ್ದರು.

ತೆಲಂಗಾಣ ಸಿಎಂ ಕೆ ಸಿ ಚಂದ್ರಶೇಖರ್​ ರಾವ್​ ಮಗ ಕೆಟಿಆರ್​, ಡಿಎಂಕೆ ಸಂಸದೆ ಕನಿಮೊಳಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಕೇಂದ್ರ ಆರೋಗ್ಯ ಖಾತೆ ಮಾಜಿ ಸಚಿವ ಹರ್ಷವರ್ಧನ್​ ಅವರ ಮಾಹಿತಿಯೂ ಸೋರಿಕೆ ಆಗಿದೆ. ಇವರೆಲ್ಲರೂ ಲಸಿಕೆ ಪಡೆಯುವ ವೇಳೆ ಪಾಸ್​ಪೋರ್ಟ್​ ಮಾಹಿತಿಯನ್ನು ನೀಡಿದ್ದರು.

ದತ್ತಾಂಶ ಸೋರಿಕೆ ಬಗ್ಗೆ ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ, ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ ಅವರು ಕೂಡಾ ಮಾತಾಡಿದ್ದಾರೆ. ಜೊತೆಗೆ ತಮ್ಮದೇ ಖಾಸಗಿ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಎಚ್ಚರಿಕೆ: ನಿರಾಕರಿಸಿದ್ದ ಮೋದಿ ಸರ್ಕಾರ

2021ರ ಜೂನ್​ನಲ್ಲಿ ಕೋವಿನ್​ ಪೋರ್ಟಲ್​ಗೆ ನೀಡಲಾಗಿರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳೆಲ್ಲವೂ ಸೋರಿಕೆ ಆಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಆಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆ ಆರೋಪವನ್ನು ನಿರಾಕರಿಸಿತ್ತು.

ಕಳೆದ ವರ್ಷದ ಜನವರಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ನಿರ್ವಹಣಾಧಿಕಾರಿ ಆರ್​ ಎಸ್​ ಶರ್ಮಾ ಅವರು

ಕೋವಿನ್​ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಜನರ ಮಾಹಿತಿಗಳೆಲ್ಲವೂ ಸುರಕ್ಷಿತ ಮತ್ತು ಸುಭದ್ರವಾಗಿದೆ ಹಾಗೂ ಕೋವಿನ್​ ಯಾವತ್ತೂ ದತ್ತಾಂಶ ಸೋರಿಕೆ ಎದುರಿಸಿಲ್ಲ ಮತ್ತು ಕೋವಿನ್​ನಿಂದ ದತ್ತಾಂಶ ಸೋರಿಕೆ ಆಗಿದೆ ಎಂಬ ಆರೋಪಕ್ಕೆ ಯಾವುದೇ ಬೆಲೆ ಇಲ್ಲ

ಎಂದು ಸಮರ್ಥಿಸಿಕೊಂಡಿದ್ದರು.