Rahul Gandhi: ಸುಪ್ರೀಂಕೋರ್ಟ್​ಗೆ ರಾಹುಲ್ ಗಾಂಧಿ​ ಮೇಲ್ಮನವಿ

ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮನ್ನು ದೋಷಿ ಎಂದು ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಸೂರತ್​ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಹುಲ್​ ಅವರು ಗುಜರಾತ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠ ರಾಹುಲ್​ ಅವರ ಮೇಲ್ಮನವಿಯನ್ನು ವಜಾಗೊಳಿಸಿತ್ತು.

ರಾಹುಲ್​ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಮೂಲ ಅರ್ಜಿದಾರರಾಗಿರುವ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಅವರು ಸುಪ್ರೀಂಕೋರ್ಟ್​ನಲ್ಲಿ ಕೇವಿಯೇಟ್​ ಸಲ್ಲಿಸಿದ್ದಾರೆ.

ಕೇವಿಯೇಟ್​ ಸಲ್ಲಿಕೆ ಹಿನ್ನೆಲೆಯಲ್ಲಿ ರಾಹುಲ್​ ಅವರ ಅರ್ಜಿಯ ಮೇಲೆ ಆದೇಶ ಕೊಡುವುದಕ್ಕೂ ಮೊದಲು ಪೂರ್ಣೇಶ್​ ಮೋದಿಯವರ ವಾದವನ್ನು ಆಲಿಸಬೇಕಾಗುತ್ತದೆ.

ಒಂದು ವೇಳೆ ರಾಹುಲ್​ ಅವರಿಗೆ ವಿಧಿಸಲಾಗಿರುವ ದೋಷಿ ಮತ್ತು ಶಿಕ್ಷೆಯ ತೀರ್ಪಿಗೆ ಸುಪ್ರೀಂಕೋರ್ಟ್​ ತಡೆಯಾಜ್ಞೆ ನೀಡಿದರೆ ಆಗ ತತ್​ಕ್ಷಣವೇ ಅವರ ಸಂಸದ ಸ್ಥಾನ ಮರಳಿ ಸಿಗುತ್ತದೆ. ಒಂದು ವೇಳೆ ತಡೆಯಾಜ್ಞೆ ನೀಡದೇ ವಿಚಾರಣೆಯನ್ನು ಮುಂದೂಡಿದರೆ ಅನರ್ಹತೆ ಮುಂದುವರಿಯುತ್ತದೆ.

ಮಾರ್ಚ್ 23ರಂದು ಸೂರತ್​ ನ್ಯಾಯಾಲಯ ರಾಹುಲ್​ ವಿರುದ್ಧ ತೀರ್ಪು ನೀಡಿತ್ತು. ಮಾರ್ಚ್​ 23ರಿಂದಲೇ ಅನ್ವಯವಾಗುವಂತೆ ರಾಹುಲ್​ ಅವರ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಮಾರ್ಚ್​ 24ರಂದು ಲೋಕಸಭಾ ಸ್ಪೀಕರ್​ ಅದೇಶಿಸಿದ್ದರು. ಆ ಬಳಿಕ ಏಪ್ರಿಲ್​ 16ರಂದು ರಾಹುಲ್​ ಅವರು ತಮ್ಮ ಹಂಚಿಕೆಯಾಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು.​

LEAVE A REPLY

Please enter your comment!
Please enter your name here