ಮೋದಿಗೆ ನಿಂದನೆ ಆರೋಪ – ವಿಮಾನದಿಂದ ಇಳಿಸಿ ಕಾಂಗ್ರೆಸ್​ ನಾಯಕನ ಬಂಧನ – ಅರೆಸೇನಾ ಪೊಲೀಸರ ಬಳಕೆ

ಪ್ರಧಾನಿ ನರೇಂದ್ರ ಮೋದಿಗೆ ನಿಂದನೆ ಮಾಡಿದ್ದಾರೆ ಎಂಬ ದೂರಿನಡಿಯಲ್ಲಿ ಬಿಜೆಪಿ ಆಡಳಿತವಿರುವ ಅಸ್ಸಾಂ ಸರ್ಕಾರದ ಪೊಲೀಸರು ಕಾಂಗ್ರೆಸ್​ ನಾಯಕ ಪವನ್​ ಖೇರಾ ಅವರನ್ನು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಗೆ ಬಂದ ಅಸ್ಸಾಂ ಪೊಲೀಸರು ಇಂಡಿಗೋ ವಿಮಾನದಿಂದ ಇಳಿಸಿ ಪವನ್​ ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ರಾಯ್ಪುರದಲ್ಲಿ ಆಯೋಜನೆಗೊಂಡಿರುವ ಎಐಸಿಸಿ ಅಧಿವೇಶನಕ್ಕೆ ಇತರೆ ಕಾಂಗ್ರೆಸ್​ ನಾಯಕರ ಜೊತೆಗೆ ಪವನ್​ ಖೇರಾ ಅವರು ತೆರಳಲು ಸಿದ್ಧರಾಗಿದ್ದರು.

ದೆಹಲಿ ವಿಮಾನನಿಲ್ದಾಣಕ್ಕೆ ಬಂದ ಅಸ್ಸಾಂ ಪೊಲೀಸರು ಕಾಂಗ್ರೆಸ್​ನ ಮಾಧ್ಯಮ ಮತ್ತು ಸಾರ್ವಜನಿಕ ಪ್ರಚಾರ ಸಮಿತಿ ಮುಖ್ಯಸ್ಥ ಖೇರಾ ಅವರನ್ನು ಬಂಧಿಸಿದರು.

ಖೇರಾ ಬಂಧನಕ್ಕೆ ಅಸ್ಸಾಂ ಪೊಲೀಸರು ಅರೆಸೇನಾ ಪಡೆಯ ಪೊಲೀಸರನ್ನೂ ಬಳಸಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲಿ ಗುಜರಾತ್​ ಮೂಲದ ಉದ್ಯಮಿ ಮತ್ತು ಪ್ರಧಾನಿ ನರೇಂದ್ರ ಮೋದಿ ಆಪ್ತ ಗೌತಮ್​ ಅದಾನಿ ಹಗರಣಗಳ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ಆಗ್ರಹಿಸಿದ್ದ ಪವನ್​ ಖೇರಾ ಅವರು ನರೇಂದ್ರ ಗೌತಮ್​ ದಾಸ್​ ಮೋದಿ ಎಂಬ ಪದ ಬಳಕೆ ಮಾಡಿದ್ದರು.

ಈ ಪದ ಬಳಕೆಯಿಂದ ಪ್ರಧಾನಿ ಮೋದಿ ಅವರಿಗೆ ಅವಮಾನವಾಗಿದೆ ಎಂದು ಆರೋಪಿಸಿ ಅಸ್ಸಾಂನಲ್ಲಿ ದೂರು ದಾಖಲಿಸಲಾಗಿತ್ತು.

ಕಳೆದ ವರ್ಷದ ಏಪ್ರಿಲ್​ನಲ್ಲಿ ಬಿಜೆಪಿ ಆಡಳಿತವಿರುವ ಅಸ್ಸಾಂ ರಾಜ್ಯದ ಪೊಲೀಸರು ಗುಜರಾತ್​ಗೆ ತೆರಳಿ ಕಾಂಗ್ರೆಸ್​ ಶಾಸಕ ಜಿಗ್ನೇಶ್​ ಮೆವಾನಿ ಅವರನ್ನು ಬಂಧಿಸಿದ್ದರು.

ಪ್ರಧಾನಿ ಮೋದಿ ವಿರುದ್ಧ ಟ್ವೀಟಿಸಲಾಯಿತು ಎಂಬ ಕಾರಣಕ್ಕೆ ಮಧ್ಯರಾತ್ರಿ ಮೆವಾನಿ ಬಂಧನವಾಗಿತ್ತು.

ಅಸ್ಸಾಂಗೆ ಕರೆದುಕೊಂಡು ಬಂದ ಬಳಿಕ ತಕ್ಷಣವೇ ಮೆವಾನಿ ಅವರಿಗೆ ಜಾಮೀನು ಸಿಕ್ಕಿತ್ತಾದ್ರೂ ಅಸ್ಸಾಂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಪ್ರಕರಣ ದಾಖಲಿಸಿಕೊಂಡಿದ್ದ ಅಸ್ಸಾಂ ಪೊಲೀಸರು ಮೆವಾನಿ ಅವರನ್ನು ಮತ್ತೆ ಬಂಧಿಸಿದ್ದರು.

ಅಸ್ಸಾಂ ಪೊಲೀಸರ ಕ್ರಮವನ್ನು ಕಟು ಮಾತುಗಳಿಂದ ತರಾಟೆ ತೆಗೆದುಕೊಂಡ ಅಸ್ಸಾಂನ ಸ್ಥಳೀಯ ಕೋರ್ಟ್​ ಮೆವಾನಿಗೆ ಮತ್ತೆ ಜಾಮೀನು ಮಂಜೂರು ಮಾಡಿತ್ತು.

LEAVE A REPLY

Please enter your comment!
Please enter your name here