‌ಉಪ ಚುನಾವಣಾ ಸೋಲಿಗೆ ಕಾಂಗ್ರೆಸ್‌ನಲ್ಲಿ ಇಬ್ಬರೂ ರಾಜೀನಾಮೆ

ಉಪ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಹೋರಾಟ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಇತ್ತ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ಕೂಡಾ ರಾಜೀನಾಮೆ ನೀಡಿದ್ದಾರೆ.

ಪ್ರಾಮಾಣಿಕ ಪರಿಶ್ರಮದ ಹೊರತಾಗಿಯೂ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ತೃಪ್ತಿದಾಯಕ ಫಲಿತಾಂಶವನ್ನು ತಂದುಕೊಡುವಲ್ಲಿ ನಾನು ವಿಫಲನಾಗಿದ್ದಕ್ಕೆ ನಾನು ವಿಷಾದಿಸುತ್ತೇನೆ. ಹೀಗಾಗಿ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಬೆಂಬಲಿಸಿದ ಮತದಾರರಿಗೆ ನಾನು ಕೃತಜ್ಞನಾಗಿದ್ದೇನೆ. ದುಡ್ಡು,ಜಾತಿ,ವೈಯಕ್ತಿಕ‌ ಲಾಭದಂತಹ ದೌರ್ಬಲ್ಯಗಳನ್ನು ಮೆಟ್ಟಿನಿಂತ ನಿಮ್ಮಂತಹ ಮತದಾರರಿಂದ‌ ಮಾತ್ರ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ. ಸದಾ ನಿಮ್ಮ ಜೊತೆ ನಾನಿದ್ದೇನೆ.

ನಮ್ಮದು ಕಾರ್ಯಕರ್ತರ ಪಕ್ಷ. ಈ ಉಪಚುನಾವಣೆಯಲ್ಲಿ ರಾಜ್ಯದ ಲಕ್ಷಾಂತರ ಕಾರ್ಯಕರ್ತರು ಕಷ್ಟ-ನಷ್ಟಗಳನ್ನು‌ ಎದುರಿಸಿ ಹಗಲಿರಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ನಿಮ್ಮ ಹೋರಾಟದ ಹಾದಿಯಲ್ಲಿ ನಾನು ಸದಾ ನಿಮ್ಮ ಸಂಗಾತಿಯಾಗಿರುವೆ.

ಪ್ರತಿಕೂಲ ವಾತಾವರಣ‌ ಎದುರಿಸಿ ಗೆದ್ದ ಹುಣಸೂರು ಕ್ಷೇತ್ರದ ಅಭ್ಯರ್ಥಿ ಮತ್ತು ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಅವರಿಗೆ ಅಭಿನಂದನೆಗಳು. ಪಕ್ಷದ ಪರಾಜಿತ ಅಭ್ಯರ್ಥಿಗಳ ಹೋರಾಟದ ಕೆಚ್ಚಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ‌ ಗೆಲುವು ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here